ನವದೆಹಲಿ : ದೇಶಾದ್ಯಂತ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ನಿರಾಸೆ ಮೂಡಿಸಿದೆ. ಈ ಬಾರಿ ವಾಡಿಕೆಗಿಂತ ಮುಂಚಿತವಾಗಿ ಅಂದರೆ ಮೇ 26ರಂದೇ ಕೇರಳ ಕರಾವಳಿಗೆ ನೈಋತ್ಯ ಮುಂಗಾರು (Southwest Monsoon) ಪ್ರವೇಶಿಸಲಿದೆ ಎಂದು ಇತ್ತೀಚೆಗೆ ಹವಾಮಾನ ಇಲಾಖೆ ಅಂದಾಜಿಸಿತ್ತು. ಆದರೆ ವಾತಾವರಣ ಮತ್ತು ಮೋಡಗಳ ದಿಕ್ಕು ಬದಲಾವಣೆಯಿಂದಾಗಿ ಮುಂಗಾರು ಮಾರುತಗಳ ಆಗಮನ ವಿಳಂಬವಾಗಿದ್ದು, ಜೂನ್ 2ರಿಂದ 4ರ ನಡುವೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಹೊಸ ಮುನ್ಸೂಚನೆ ತಿಳಿಸಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1 ರ ಸುಮಾರಿಗೆ ದೇಶದ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಕೇರಳವನ್ನು ತಲುಪುತ್ತವೆ. ಅಲ್ಲಿಂದ ಮುಂದಿನ ನಾಲ್ಕು ತಿಂಗಳುಗಳ ಕಾಲ ಉತ್ತರ ಭಾರತದತ್ತ ಪಯಣ ಬೆಳೆಸುವ ಈ ಮಾರುತಗಳು, ಭಾರತದ ಒಟ್ಟು ವಾರ್ಷಿಕ ಮಳೆಯಲ್ಲಿ ಶೇ.70ಕ್ಕಿಂತ ಹೆಚ್ಚಿನ ಪಾಲನ್ನು ನೀಡುತ್ತವೆ. ಆದರೆ ಪ್ರಸ್ತುತ ಸಮುದ್ರದ ತಾಪಮಾನ, ಗಾಳಿಯ ವೇಗ ಮತ್ತು ವಾತಾವರಣದ ಒತ್ತಡದಲ್ಲಿ ಉಂಟಾಗಿರುವ ತಾಂತ್ರಿಕ ಏರುಪೇರುಗಳಿಂದಾಗಿ ಮುಂಗಾರು ಮಾರುತಗಳು ನಿಗದಿತ ಸಮಯಕ್ಕೆ ತಲುಪುತ್ತಿಲ್ಲ.
ಹವಾಮಾನ ಇಲಾಖೆಯ ನಿಯಮಾವಳಿಗಳ ಪ್ರಕಾರ, ಮುಂಗಾರು ಅಧಿಕೃತವಾಗಿ ಪ್ರವೇಶಿಸಿದೆ ಎಂದು ಘೋಷಿಸಲು 3 ಪ್ರಮುಖ ತಾಂತ್ರಿಕ ಮಾನದಂಡಗಳು ಒಟ್ಟಿಗೆ ಹೊಂದಾಣಿಕೆಯಾಗಬೇಕಾಗುತ್ತದೆ. ಕೇರಳದಲ್ಲಿ ಗುರುತಿಸಲಾಗಿರುವ 14 ಹವಾಮಾನ ಕೇಂದ್ರಗಳ ಪೈಕಿ ಕನಿಷ್ಠ ಶೇ.60 ರಷ್ಟು ಕೇಂದ್ರಗಳಲ್ಲಿ ಸತತ ಎರಡು ದಿನಗಳ ಕಾಲ 2.5 ಮಿಲಿಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯಾಗಬೇಕು.
ಇದರೊಂದಿಗೆ ಗಾಳಿಯ ದಿಕ್ಕು ಮತ್ತು ಮೋಡಗಳ ಸಾಂದ್ರತೆಯೂ ನಿರ್ದಿಷ್ಟ ಮಟ್ಟ ತಲುಪಿರಬೇಕು. ಮೇ 25ರವರೆಗಿನ ವರದಿಗಳ ಪ್ರಕಾರ ಈ ಯಾವುದೇ ಮಾನದಂಡಗಳು ಪೂರ್ಣಗೊಳ್ಳದ ಕಾರಣ ಮುಂಗಾರು ಘೋಷಣೆಯನ್ನು ಮುಂದೂಡಲಾಗಿದೆ. ಅಲ್ಲದೆ, ಈ ಬಾರಿ ಮುಂಗಾರು ಆರಂಭದಲ್ಲಿ ಅಷ್ಟೊಂದು ತೀವ್ರತೆ ಹೊಂದಿಲ್ಲದಿರುವುದರಿಂದ ದೇಶದ ಇತರೆ ಭಾಗಗಳಿಗೆ ಇದು ನಿಧಾನಗತಿಯಲ್ಲಿ ವ್ಯಾಪಿಸಲಿದೆ ಎಂದು ವಿಶ್ಲೇಷಿಸಲಾಗಿದೆ.
ಕೇರಳದಲ್ಲಿ ಪೂರ್ವ ಮುಂಗಾರು ಅಬ್ಬರ
ಅಧಿಕೃತ ಮುಂಗಾರು ಪ್ರವೇಶ ವಿಳಂಬವಾಗಿದ್ದರೂ, ಕೇರಳದಾದ್ಯಂತ ಮುಂಗಾರು ಪೂರ್ವ ಮಳೆ (Pre-monsoon rains) ಈಗಾಗಲೇ ಚುರುಕಾಗಿದೆ. ಹವಾಮಾನ ಇಲಾಖೆಯು ತಿರುವನಂತಪುರಂ, ಕೊಲ್ಲಂ, ಆಲಪ್ಪುಳ ಮತ್ತು ಎರ್ನಾಕುಲಂ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಗಾಳಿಯ ಮುನ್ಸೂಚನೆ ನೀಡಿ ‘ಯೆಲ್ಲೋ ಅಲರ್ಟ್’ ಘೋಷಿಸಿದೆ.
ಲಕ್ಷದ್ವೀಪ ಹಾಗೂ ಕೇರಳದ ಕರಾವಳಿ ತೀರಗಳಲ್ಲಿ ವಾರಾಂತ್ಯದವರೆಗೆ ಮಳೆ ಮುಂದುವರಿಯಲಿದೆ ಎಂದು ಹೇಳಿದೆ. ಆದರೆ, ಉತ್ತರ ಮತ್ತು ಮಧ್ಯ ಭಾರತದ ಪರಿಸ್ಥಿತಿ ತೀರಾ ಭಿನ್ನವಾಗಿದೆ. ನವದೆಹಲಿ, ಪಶ್ಚಿಮ ರಾಜಸ್ಥಾನ, ವಿದರ್ಭ ಮತ್ತು ಪೂರ್ವ ಉತ್ತರ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ತೀವ್ರತರವಾದ ಉಷ್ಣಗಾಳಿ ಮುಂದುವರಿದಿದೆ. ದೆಹಲಿಯಲ್ಲಿ ಹಗಲಿನ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟುತ್ತಿದ್ದರೆ, ರಾತ್ರಿಯ ವೇಳೆಯೂ 30 ಡಿಗ್ರಿ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಜನ ಕಂಗಾಲಾಗಿದ್ದಾರೆ.
‘ಎಲ್ ನಿನೊ’ ಪ್ರಭಾವದ ಆತಂಕ
ಮುಂಗಾರು ಕೇವಲ ಒಂದರಿಂದ ಮೂರು ದಿನಗಳಷ್ಟು ತಡವಾಗಿ ಆಗಮಿಸುತ್ತಿರುವುದು ದೊಡ್ಡ ಆತಂಕದ ವಿಷಯವಲ್ಲದಿದ್ದರೂ, ಈ ವರ್ಷದ ಒಟ್ಟಾರೆ ಮಳೆಯ ಪ್ರಮಾಣದ ಮೇಲೆ ಹವಾಮಾನ ಇಲಾಖೆ ಕಳವಳ ವ್ಯಕ್ತಪಡಿಸಿದೆ. ವರ್ಷದ ಕೊನೆಯ ಭಾಗದಲ್ಲಿ ಸಕ್ರಿಯಗೊಳ್ಳಲಿರುವ ‘ಎಲ್ ನಿನೊ’ (El Nino) ವಿದ್ಯಮಾನದ ಕಾರಣದಿಂದಾಗಿ ಈ ಸಾಲಿನಲ್ಲಿ ದೇಶಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಂಗಳುಗಳ ಹಿಂದೆಯೇ ಎಚ್ಚರಿಸಿತ್ತು.
ಇದನ್ನೂ ಓದಿ : ಇರಾನ್‌ನ ಬಂದರ್ ಅಬ್ಬಾಸ್ ಮೇಲೆ ಅಮೆರಿಕ ದಾಳಿ : ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಸೂಚನೆ!



















