ಟೆಹ್ರಾನ್ : ಇರಾನ್-ಅಮೆರಿಕ ಒಪ್ಪಂದದ ನಿರೀಕ್ಷೆ ಹುಸಿಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಉಭಯ ದೇಶಗಳ ನಡುವಿನ ಯುದ್ಧದ ವಾತಾವರಣ ಮತ್ತಷ್ಟು ಕಾವೇರಿದೆ. ಇರಾನ್‌ನ ದಕ್ಷಿಣ ಕರಾವಳಿ ಭಾಗದಲ್ಲಿರುವ ಆಯಕಟ್ಟಿನ ಬಂದರು ನಗರಿ ಬಂದರ್ ಅಬ್ಬಾಸ್ ಮೇಲೆ ಅಮೆರಿಕ ಸೇನೆ ಭೀಕರ ವಾಯುದಾಳಿ ನಡೆಸಿದೆ.
ಇರಾನ್‌ನ ಕ್ಷಿಪಣಿ ಉಡಾವಣಾ ನೆಲೆಗಳು ಹಾಗೂ ಪರ್ಷಿಯನ್ ಕೊಲ್ಲಿಯಲ್ಲಿ ಮೈನ್‌ಗಳನ್ನು (ಸಮುದ್ರಾಂತರ್ಗತ ಸ್ಫೋಟಕಗಳು) ಅಳವಡಿಸಲು ಯತ್ನಿಸುತ್ತಿದ್ದ ಇರಾನಿ ಬೋಟ್‌ಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಮಿಲಿಟರಿ ಕಮಾಂಡ್ ಸ್ಪಷ್ಟಪಡಿಸಿದೆ.
ಕತಾರ್ ರಾಜಧಾನಿ ದೋಹಾದಲ್ಲಿ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ದಾಳಿ ನಡೆದಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಕದನ ವಿರಾಮದ ನಡುವೆಯೂ, ತನ್ನ ಪಡೆಗಳ ರಕ್ಷಣೆಗಾಗಿ “ಆತ್ಮರಕ್ಷಣೆ”ಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಸಮರ್ಥಿಸಿಕೊಂಡಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನತೆ
ವಿಶ್ವದ ಪ್ರಮುಖ ಇಂಧನ ಸಾಗಣೆಯ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಪ್ರವೇಶದ್ವಾರದಲ್ಲೇ ಇರುವ ಬಂದರ್ ಅಬ್ಬಾಸ್, ಇರಾನ್‌ನ ನೌಕಾಸೇನೆ ಮತ್ತು ವಾಯುಪಡೆಯ ಪ್ರಧಾನ ನೆಲೆಯಾಗಿದೆ. ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಬಳಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಶತ್ರುಗಳ ದಾಳಿಯನ್ನು ಎದುರಿಸಲು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ.
ಇದಕ್ಕೂ ಮುನ್ನ ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸೇನೆ ಹೇಳಿಕೊಂಡಿತ್ತು. ಅಮೆರಿಕದ ಈ ಹೊಸ ಆಕ್ರಮಣಕ್ಕೆ ಇರಾನ್ ಸರ್ಕಾರ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲವಾದರೂ, ಅಲ್ಲಿನ ರಾಷ್ಟ್ರೀಯ ಭದ್ರತಾ ಮಂಡಳಿಯ ನಾಯಕ ಮೊಹಮ್ಮದ್ ಬಾಗೇರ್ ಜೊಲ್ಘಾದ್ರ್, “ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಇರಾನ್ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ” ಎಂದು ಜನತೆಗೆ ಸಂದೇಶ ನೀಡಿದ್ದಾರೆ.
ದೋಹಾ ಶಾಂತಿ ಮಾತುಕತೆಗೆ ಹಿನ್ನಡೆ?
ವಿಪರ್ಯಾಸವೆಂದರೆ, 3 ತಿಂಗಳಿನಿಂದ ನಡೆಯುತ್ತಿರುವ ಈ ಭೀಕರ ಸಂಘರ್ಷವನ್ನು ಕೊನೆಗಾಣಿಸಲು ಇರಾನ್‌ನ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಗೇರ್ ಗಾಲಿಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ಕತಾರ್ ಪ್ರಧಾನಿ ಸಮ್ಮುಖದಲ್ಲಿ ಮಾತುಕತೆ ನಡೆಸುತ್ತಿದ್ದಾಗಲೇ ಈ ದಾಳಿ ನಡೆದಿದೆ. ಈ ಮಾತುಕತೆಯಲ್ಲಿ ಸ್ವಲ್ಪ ಪ್ರಗತಿಯಾಗಿದ್ದರೂ, ಶಾಂತಿ ಒಪ್ಪಂದ ತಕ್ಷಣವೇ ಸಾಧ್ಯವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇರಾನ್‌ನ ಪ್ರಭಾವಿ ಹಣಕಾಸು ನಿಧಿಗಳ ಮೇಲಿನ ನಿರ್ಬಂಧ ತೆರವುಗೊಳಿಸುವುದು ಮತ್ತು ಹೊರ್ಮುಜ್ ಜಲಸಂಧಿಯ ಭದ್ರತೆಯ ಕುರಿತು ದೋಹಾದಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
‘ಯುರೇನಿಯಂ’ ಎಚ್ಚರಿಕೆ ನೀಡಿದ ಟ್ರಂಪ್
ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಇರಾನ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನಲ್ಲಿರುವ ಸಂವರ್ಧಿತ ಯುರೇನಿಯಂ (Enriched Uranium) ಅನ್ನು ತಕ್ಷಣವೇ ಅಮೆರಿಕಕ್ಕೆ ಹಸ್ತಾಂತರಿಸಬೇಕು, ಇಲ್ಲವೇ ಅಂತಾರಾಷ್ಟ್ರೀಯ ಪರಮಾಣು ಸಂಸ್ಥೆಯ ಸಮ್ಮುಖದಲ್ಲಿ ಇರಾನ್‌ನಲ್ಲೇ ಅದನ್ನು ನಾಶಪಡಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.
“ಇರಾನ್ ಬಳಿ ಇರುವ ಪರಮಾಣು ಧೂಳನ್ನು (ಸಂವರ್ಧಿತ ಯುರೇನಿಯಂ) ತಕ್ಷಣವೇ ಅಮೆರಿಕಕ್ಕೆ ತಂದು ನಾಶಪಡಿಸಬೇಕು. ಇಲ್ಲವೇ ಇರಾನ್ ಸರ್ಕಾರವು ಅಣುಶಕ್ತಿ ಆಯೋಗದ ಸಾಕ್ಷ್ಯದೊಂದಿಗೆ ತನ್ನ ನೆಲದಲ್ಲೇ ಅದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಬೇಕು” ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ಅಲ್ಲದೆ, ಇರಾನ್ ಜೊತೆಗಿನ ಶಾಂತಿ ಒಪ್ಪಂದದ ಭಾಗವಾಗಿ ಸೌದಿ ಅರೇಬಿಯಾ, ಯುಎಇ, ಕತಾರ್, ಪಾಕಿಸ್ತಾನ ಮತ್ತು ಈಜಿಪ್ಟ್ ಸೇರಿದಂತೆ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆಗಿನ ‘ಅಬ್ರಹಾಂ ಒಪ್ಪಂದಕ್ಕೆ’ (Abraham Accords) ಕಡ್ಡಾಯವಾಗಿ ಸಹಿ ಹಾಕಬೇಕು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಆದರೆ, ಪ್ಯಾಲೇಸ್ತೀನ್ ಸಮಸ್ಯೆಯನ್ನು ಪರಿಹರಿಸದ ಹೊರತು ಇಸ್ರೇಲ್ ಜೊತೆ ಯಾವುದೇ ಸಾಮಾನ್ಯ ಬಾಂಧವ್ಯ ಸಾಧ್ಯವಿಲ್ಲ ಎಂದು ಸೌದಿ ಅರೇಬಿಯಾ ಮತ್ತು ಕತಾರ್ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣಗೊಂಡಿದೆ.
ಇದನ್ನೂ ಓದಿ : ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನ : ಸಿಎಂ ವಿಜಯ್ ಗ್ರೀನ್ ಸಿಗ್ನಲ್



















