ರಾಯ್ಪುರ : ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಶಕ್ತಿ ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ದಾಬ್ರಾ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಈ ಅವಘಡ ಸಂಭವಿಸಿದೆ. ಪೊಲೀಸ್ ವರಿಷ್ಠಾಧಿಕಾರಿ ಪ್ರಫುಲ್ ಠಾಕೂರ್ ಕಾರ್ಮಿಕರ ಸಾವನ್ನು ದೃಢಪಡಿಸಿದ್ದಾರೆ. ಗಾಯಗೊಂಡ ಕಾರ್ಮಿಕರಲ್ಲಿ ಅನೇಕರಿಗೆ ಗಂಭೀರ ಸುಟ್ಟ ಗಾಯಗಳಾಗಿದೆ. ಇನ್ನೂ ಹಲವರ ಸ್ಥಿತಿ ಚಿಂತಜನಕವಾಗಿದೆ ಎಂದು ವರದಿಯಾಗಿದೆ.
ಸಿಂಘಿತಾರಿ ಗ್ರಾಮದಲ್ಲಿರುವ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಎಂದಿನಂತೆ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಯ್ಲರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಬಾಯ್ಲರ್ ಒಳಗೆ ಟ್ಯೂಬ್ ಛಿದ್ರಗೊಂಡಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಘಟನೆಯ ಕುರಿತು ಮಾಹಿತಿ ಸಿಕ್ಕ ತಕ್ಷಣ ಪೊಲೀಸರು, ಅಗ್ನಿಶಾಮಕ ದಳದ ತಂಡಗಳು ಮತ್ತು ಹಿರಿಯ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಸ್ಫೋಟದ ನಿಖರವಾದ ಕಾರಣವನ್ನು ಕಂಡುಹಿಡಿಯಲು ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ವಿಜಯಪುರದಲ್ಲಿ ಅಮಾನವೀಯ ಘಟನೆ.. ನೋಡಲು ತನ್ನಂತಿಲ್ಲ ಎಂದು ನದಿಗೆ ತಳ್ಳಿ ಮಗನನ್ನೇ ಹತ್ಯೆಗೈದ ತಂದೆ!



















