ವಿಜಯಪುರ : ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಭೀಕರ ಗುಂಡಿನ ದಾಳಿ ನಡೆಸಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜು ಖರೆ ಎಂಬಾತನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿ ಈ ಘಟನೆ ನಡೆದಿದೆ.

ವಿಜಯಪುರದ ಗೋಲ್ಡನ್ ದೊಡ್ಡಿ ನಿವಾಸಿಯಾಗಿರುವ ರಾಜು ಖರೆ, ತಮ್ಮ ಕೆಂಪು ಬಣ್ಣದ ಥಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಟಿಪ್ಪರ್‌ನಿಂದ ಥಾರ್ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರು ನಿಲ್ಲುತ್ತಿದ್ದಂತೆಯೇ ಏಕಾಏಕಿ ದಾಳಿ ನಡೆಸಿದ್ದಾರೆ.

ಹಂತಕರು ಕಾರಿನ ಮೇಲೆ ಮನಬಂದಂತೆ ಸುಮಾರು 6 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯ ಬಳಿಕ ಕಾರಿನ ಡೋರ್ ತೆರೆಯದ ಕಾರಣ ಕಲ್ಲುಗಳನ್ನು ಎತ್ತಿ ಕಾರಿನ ಗಾಜುಗಳ ಮೇಲೆ ಎಸೆದಿದ್ದಾರೆ. ಬಳಿಕ ರಾಜು ಖರೆ ಮೇಲೆ ಹಲ್ಲೆ ನಡೆಸಿ ಸ್ಥಳದಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಕೂಡಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ವಿಜಯಪುರ ಗ್ರಾಮೀಣ ಪೊಲೀಸರು ಹಾಗೂ ಎಪಿಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಎಸ್‌ಪಿ ಲಕ್ಷ್ಮಣ ನಿಂಬರಗಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಭೀಕರ ಸ್ಫೋಟ – 9 ಕಾರ್ಮಿಕರು ದುರ್ಮರಣ!



















