ವಿಜಯಪುರ : ಮಗ ನೋಡಲು ತನ್ನಂತೆ ಇಲ್ಲ ಎಂಬ ಕಾರಣಕ್ಕೆ ಮಗನನ್ನೇ ಪಾಪಿ ತಂದೆಯೊಬ್ಬ ಕೊಲೆ ಮಾಡಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ನಾಗಠಾಣ ಗ್ರಾಮದ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6) ಹತ್ಯೆಯಾದ ಬಾಲಕ. ಮಲ್ಲಿಕಾರ್ಜುನ ಅರಕೇರಿ ಮಗನನ್ನೇ ಹತ್ಯೆ ಮಾಡಿದ ತಂದೆ.
ಕಳೆದ ಮಾರ್ಚ್ 16ರಂದು ಮಲ್ಲಿಕಾರ್ಜುನ ಪುತ್ರನನ್ನು ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. 6 ವರ್ಷದ ಪುತ್ರ ಸಿದ್ದಾರ್ಥ ನೋಡಲು ನಿನ್ನಂತಿಲ್ಲ ಎಂದು ಗ್ರಾಮದಲ್ಲಿ ಕೆಲವರು ಪ್ರತಿನಿತ್ಯ ಮಲ್ಲಿಕಾರ್ಜುನನ್ನ ಚುಡಾಯಿಸಿದ್ದರಂತೆ. ಇದನ್ನ ಗಂಭೀರವಾಗಿ ಪರಿಗಣಿಸಿ ಮಲ್ಲಿಕಾರ್ಜುನ ಮಗ ಸಿದ್ಧಾರ್ಥನನ್ನ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.
ಮಾರ್ಚ್ 16 ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿ ಕೃಷ್ಣಾ ನದಿ ಬಳಿ ಕರೆದುಕೊಂಡು ಹೋಗಿ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಬಳಿಕ ಮಗನನ್ನು ಸಿಂದಗಿ ಬಳಿ ಶಾಲೆಗೆ ಸೇರಿಸಿ ಹಾಸ್ಟೆಲ್‌ನಲ್ಲಿ ಇಟ್ಟಿದ್ದಾಗಿ ಕುಟುಂಬಸ್ಥರಿಗೆ ಸುಳ್ಳು ಹೇಳಿದ್ದ.
ಆದರೆ ಏಪ್ರಿಲ್ 1ರಂದು ಮಗನ ಹುಟ್ಟು ಹಬ್ಬದ ದಿನ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರಿ ಪಟ್ಟು ಹಿಡಿದಿದ್ದಳು. ಮಗ ಎಲ್ಲಿದ್ದಾನೆ ಎಂದು ಕೇಳಿದಾಗ ಮನೆಯಿಂದ ಮಲ್ಲಿಕಾರ್ಜುನ ಓಡಿ ಹೋಗಿದ್ದನಂತೆ. ಇದರಿಂದಾಗಿ ಅನುಮಾನ ಬಂದು ತಾಯಿ ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದಾಳೆ. ತದನಂತರ ಪೊಲೀಸರ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಮಲ್ಲಿಕಾರ್ಜುನ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ : ಶಿಸ್ತು ಉಲ್ಲಂಘಿಸಿದ ಮುಂಬೈ ಇಂಡಿಯನ್ಸ್ : ಹಾರ್ದಿಕ್ ಪಾಂಡ್ಯಗೆ ದಂಡ, ಟಿಮ್ ಡೇವಿಡ್‌ಗೆ ಶಿಕ್ಷೆ!



















