ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚುತ್ತಿದ್ದಂತೆ ಸೈಬರ್ ವಂಚಕರ ಹೊಸ ಕೃತ್ಯಗಳೂ ಹೆಚ್ಚುತ್ತಿವೆ. ನಾವು ಸಾಮಾನ್ಯವಾಗಿ ವಸ್ತುಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿದ ನಂತರ ಬರುವ ಪಾರ್ಸೆಲ್ ಬಾಕ್ಸ್‌ಗಳನ್ನು ಅಥವಾ ರಟ್ಟಿನ ಪೆಟ್ಟಿಗೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಈ ಬಾಕ್ಸ್ ಗಳ ಮೇಲಿರುವ ಶಿಪ್ಪಿಂಗ್ ಲೇಬಲ್ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೊಂದಿದ್ದು, ಸೈಬರ್ ವಂಚಕರಿಗೆ ದಾರಿ ಮಾಡಿಕೊಡಬಹುದು ಎಂಬ ಗಂಭೀರ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.
ಪಾರ್ಸೆಲ್ ಬಾಕ್ಸ್ ಗಳ ಮೇಲಿನ ಲೇಬಲ್ ನಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಸಂಪೂರ್ಣ ವಿಳಾಸ ಮತ್ತು ಇತರೆ ಪ್ರಮುಖ ವಿವರಗಳಿರುತ್ತವೆ. ಕಸದ ತೊಟ್ಟಿಗಳಿಂದ ಅಥವಾ ಹಳೆಯ ಬಾಕ್ಸ್ಗಳಿಂದ ವಂಚಕರು ಈ ಮಾಹಿತಿಯನ್ನು ಸುಲಭವಾಗಿ ಕಳವು ಮಾಡುತ್ತಾರೆ. ಈ ವಿವರಗಳನ್ನು ಬಳಸಿ ಅವರು ನಿಮ್ಮನ್ನು ನಕಲಿ ಕೊರಿಯರ್ ಏಜೆಂಟ್ ಅಥವಾ ಗ್ರಾಹಕ ಸೇವಾ ಪ್ರತಿನಿಧಿಯಂತೆ ಸಂಪರ್ಕಿಸಿ ಸುಲಭವಾಗಿ ವಂಚನೆಗೆ ಇಳಿಯುತ್ತಾರೆ.
ನಿಮ್ಮ ವೈಯಕ್ತಿಕ ವಿವರಗಳು ಅವರ ಬಳಿ ಇರುವುದರಿಂದ ಅವರು ಹೇಳುವ ಮಾತುಗಳು ಅಚ್ಚುಕಟ್ಟಾಗಿ ಮತ್ತು ನೈಜವಾಗಿ ಕಾಣುತ್ತವೆ. ನಂತರ ಅವರು ನಕಲಿ ಸಂದೇಶಗಳು, ಲಿಂಕ್ ಗಳು ಅಥವಾ ಒಟಿಪಿ (OTP) ಕೇಳುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು. ಇದು ಕೊನೆಗೆ ಹಣಕಾಸು ವಂಚನೆ ಹಾಗೂ ವೈಯಕ್ತಿಕ ಮಾಹಿತಿಯ ಕಳ್ಳತನಕ್ಕೆ ಕಾರಣವಾಗಬಹುದು ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ.
ಸುರಕ್ಷಿತರಾಗಿರುವುದು ಹೇಗೆ?
• ಪಾರ್ಸೆಲ್ ಬಾಕ್ಸ್ ಗಳನ್ನು ಎಸೆಯುವ ಮೊದಲು ಅದರ ಮೇಲಿರುವ ಶಿಪ್ಪಿಂಗ್ ಲೇಬಲ್ಅನ್ನು ಸಂಪೂರ್ಣವಾಗಿ ಹರಿದುಹಾಕಿ.
• ಲೇಬಲ್ ಮೇಲೆ ಮಾರ್ಕರ್ ಬಳಸಿ ನಿಮ್ಮ ಹೆಸರು, ಫೋನ್ ನಂಬರ್ ಮತ್ತು ವಿಳಾಸ ಕಾಣದಂತೆ ಮರೆಮಾಚಿ.
• ವಿಳಾಸದ ಚೀಟಿಗಳನ್ನು ಸಣ್ಣ ತುಂಡುಗಳಾಗಿ ಹರಿದು ನಂತರ ಕಸದ ಬುಟ್ಟಿಗೆ ಹಾಕಿ.
• ಯಾವುದೇ ಅಪರಿಚಿತ ಕರೆಗಳು ಅಥವಾ ಲಿಂಕ್ ಗಳ ಬಗ್ಗೆ ಎಚ್ಚರದಿಂದಿರಿ. ಯಾರಿಗೂ ಒಟಿಪಿ ಸೇರಿ ಯಾವುದೇ ಮಾಹಿತಿ ಹಂಚಿಕೊಳ್ಳದಿರಿ
ಇದನ್ನೂ ಓದಿ : ‘ಇದು ಕೇವಲ ಆರಂಭವಷ್ಟೇ, ಸಾಗಬೇಕಾದ ಹಾದಿ ಸುದೀರ್ಘವಾಗಿದೆ’ : ದೀಪ್ಕೆ ವಿಡಿಯೋ ಸಂದೇಶ!



















