ಬೆಂಗಳೂರು : ಪ್ರತಿ ತಿಂಗಳ ಆರಂಭದಂತೆ ಆಗಸ್ಟ್ 1ರಿಂದ ದೇಶದಲ್ಲಿ ಹಲವು ಪ್ರಮುಖ ಆರ್ಥಿಕ ಮತ್ತು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ನೇರವಾಗಿ ಸಾಮಾನ್ಯ ಜನರ ಮಾಸಿಕ ಬಜೆಟ್, ಉಳಿತಾಯ ಯೋಜನೆಗಳು ಮತ್ತು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಲಿವೆ. ಪ್ರಮುಖವಾಗಿ ಎಲ್ ಪಿಜಿ ಸಿಲಿಂಡರ್ ಬೆಲೆ, ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ರೈಲ್ವೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಜಾರಿಗೆ ಬರಲಿವೆ. ಮುಂಚಿತವಾಗಿ ಈ ಅಪ್ ಡೇಟ್ ಗಳನ್ನು ತಿಳಿದುಕೊಳ್ಳುವುದರಿಂದ ಅನಗತ್ಯ ತೊಂದರೆಗಳು ಮತ್ತು ಹೆಚ್ಚುವರಿ ಶುಲ್ಕಗಳಿಂದ ಪಾರಾಗಬಹುದು.
ರೈಲ್ವೆ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ
ಆಗಸ್ಟ್ 1ರಿಂದ ಭಾರತೀಯ ರೈಲ್ವೆ ಇಲಾಖೆಯು ತತ್ಕಾಲ್ (Tatkal) ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆಗಳನ್ನು ತರಲಿದೆ. ಇದರಡಿ ಕಾಯ್ದಿರಿಸುವ ಕೌಂಟರ್‌ಗಳಲ್ಲಿ ಟೋಕನ್ ವಿತರಿಸುವ ಸಮಯವನ್ನು ತತ್ಕಾಲ್ ಟಿಕೆಟ್ ಬುಕಿಂಗ್ ಸಮಯಕ್ಕೆ ಸರಿಹೊಂದಿಸಲಾಗುತ್ತದೆ. ಇದರಿಂದ ಕೌಂಟರ್ ಗಳಲ್ಲಿ ಉಂಟಾಗುವ ಜನದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಹಾಯವಾಗಲಿದೆ.
ಎಲ್ ಪಿಜಿ ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಮೊದಲ ದಿನದಂತೆ ತೈಲ ಮಾರುಕಟ್ಟೆ ಕಂಪನಿಗಳು ಆಗಸ್ಟ್ 1ರಂದು ಗೃಹಬಳಕೆ ಮತ್ತು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ಗಳ ಹೊಸ ಬೆಲೆಗಳನ್ನು ಪ್ರಕಟಿಸಲಿವೆ. ಬೆಲೆಯಲ್ಲಿ ಏರಿಕೆಯಾದರೆ ಮನೆ ಬಜೆಟ್ ಮೇಲೆ ಹೊರೆಯಾಗಲಿದೆ, ಒಂದು ವೇಳೆ ಬೆಲೆ ಇಳಿಕೆಯಾದರೆ ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಗಲಿದೆ.
ಆದಾಯ ತೆರಿಗೆ ರಿಟರ್ನ್ ಮತ್ತು ದಂಡ
ಹಣಕಾಸು ವರ್ಷಕ್ಕೆ ಸಂಬಂಧಿಸಿದ ITR-1 ಮತ್ತು ITR-2 ಸಲ್ಲಿಕೆಗೆ ಜುಲೈ 31 ಅಂತಿಮ ದಿನವಾಗಿದ್ದು, ಈ ಗಡುವನ್ನು ಮಿಸ್ ಮಾಡಿಕೊಂಡರೆ ತೆರಿಗೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ ಕೆಲವು ನಿರ್ದಿಷ್ಟ ತೆರಿಗೆ ಪದ್ಧತಿಗಳನ್ನು ಆಯ್ಕೆ ಮಾಡುವಾಗ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು.
ಸಿ-ಕೆವೈಸಿ (CKYC 2.0) ನಿಯಮಗಳು
ಗ್ರಾಹಕರ ಸುರಕ್ಷತೆ ಹೆಚ್ಚಿಸಲು ಮತ್ತು ವಂಚನೆ ತಡೆಯಲು ಬ್ಯಾಂಕ್ ಗಳು, ವಿಮಾ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್ ಸಂಸ್ಥೆಗಳು ‘ಸೆಂಟ್ರಲ್ ನೋ ಯುವರ್ ಕಸ್ಟಮರ್ 2.0’ (CKYC 2.0) ವ್ಯವಸ್ಥೆಯನ್ನು ಬಳಸಲು ಪ್ರಾರಂಭಿಸಲಿವೆ. ಇದರಿಂದ ಗ್ರಾಹಕರ ಒಪ್ಪಿಗೆಯೊಂದಿಗೆ ಅವರ ವಿವರಗಳನ್ನು ಸುರಕ್ಷಿತವಾಗಿ ಪಡೆದುಕೊಳ್ಳಲು ಸುಲಭವಾಗುತ್ತದೆ. ಜನರು ಪದೇಪದೆ ದಾಖಲೆ ಸಲ್ಲಿಸುವುದು ಕೂಡ ತಪ್ಪುತ್ತದೆ.
ಇದನ್ನೂ ಓದಿ : ಪದೇ ಪದೇ KYC ಪ್ರಕ್ರಿಯೆ ಮುಗಿಸುವ ತಲೆನೋವು ಇನ್ನಿಲ್ಲ ; ಏನಿದು C-KYC 2.0?


















