ಬೆಂಗಳೂರು : ಬ್ಯಾಂಕ್‌ನಲ್ಲಿ ಒಂದು ಖಾತೆ ತೆರೆಯಬೇಕು, ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹೂಡಿಕೆ ಮಾಡಬೇಕು, ಆರೋಗ್ಯ ವಿಮೆ ಖರೀದಿಸಬೇಕು ಎಂದರೆ, ಪದೇಪದೆ ಕೆವೈಸಿ (KYC) ಪ್ರಕ್ರಿಯೆ ಮಾಡಿಸಬೇಕು ಎಂಬ ತಲೆನೋವು ಗ್ರಾಹಕರಿಗೆ ಇರುತ್ತದೆ. ಆದರೆ, ಆಗಸ್ಟ್ 1ರಿಂದ ಇಂತಹ ತಲೆನೋವು ಇರುವುದಿಲ್ಲ. ಕೇಂದ್ರೀಯ ನೋ ಯುವರ್ ಕಸ್ಟಮರ್ (ಸಿ-ಕೆವೈಸಿ 2.0) ವ್ಯವಸ್ಥೆ ಜಾರಿಗೆ ಬರಲಿದ್ದು, ಪದೇಪದೆ ಕೆವೈಸಿ ಮಾಡಿಸುವ ಅಗತ್ಯವೇ ಇರುವುದಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ), ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಹಾಗೂ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಸಂಸ್ಥೆ (IRDAI) ಸೇರಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿವೆ. ಇದು ಸುಧಾರಿತ ಹಾಗೂ ಸಮಗ್ರ ಗ್ರಾಹಕ ಗುರುತಿನ ಪರಿಶೀಲನಾ ವ್ಯವಸ್ಥೆಯಾಗಿದೆ. ಇದರ ಮುಖ್ಯ ಉದ್ದೇಶವೇ ಗ್ರಾಹಕರ ಕೆವೈಸಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದಾಗಿದೆ.
ಜನರಿಗೆ ಇದರಿಂದ ಏನು ಲಾಭ?
ಪ್ರತ್ಯೇಕ ದಾಖಲೆಗಳ ಅಗತ್ಯವಿಲ್ಲ: ಗ್ರಾಹಕರು ಇನ್ನು ಮುಂದೆ ತಾವು ಭೇಟಿ ನೀಡುವ ಪ್ರತಿಯೊಂದು ಹೊಸ ಹಣಕಾಸು ಸಂಸ್ಥೆಗೂ ಅಥವಾ ಬ್ಯಾಂಕ್ ಗೂ ಪ್ರತ್ಯೇಕವಾಗಿ ಕೆವೈಸಿ ದಾಖಲೆಗಳನ್ನು (ಪ್ಯಾನ್ ಕಾರ್ಡ್, ಆಧಾರ್ ಇತ್ಯಾದಿ) ಸಲ್ಲಿಸಬೇಕಾದ ಅಗತ್ಯವಿರುವುದಿಲ್ಲ.
ಸಮಯ ಮತ್ತು ಶ್ರಮ ಉಳಿತಾಯ: ಒಮ್ಮೆ ಕೇಂದ್ರ ರಿಜಿಸ್ಟ್ರಿಯಲ್ಲಿ ನಿಮ್ಮ ವಿವರಗಳು ದಾಖಲಾದರೆ, ಮ್ಯೂಚುವಲ್ ಫಂಡ್ ಹೂಡಿಕೆ, ಬ್ಯಾಂಕ್ ಖಾತೆ ತೆರೆಯುವ ಪ್ರಕ್ರಿಯೆಯು ವೇಗವಾಗಿ ಮುಗಿಯುತ್ತದೆ.
ಸುಲಭ ಅನುಮೋದನೆ: ನೀವು ಹೊಸ ಖಾತೆ ತೆರೆಯುವಾಗ ಅಥವಾ ಮಾಹಿತಿ ನವೀಕರಿಸುವಾಗ, ನಿಮ್ಮ ಸಮ್ಮತಿಯೊಂದಿಗೆ ಸಂಸ್ಥೆಗಳು ಕೇಂದ್ರ ರಿಜಿಸ್ಟ್ರಿಯಿಂದ ನೇರವಾಗಿ ಪರಿಶೀಲಿಸಿದ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಈ ಕುರಿತು ನಿಮ್ಮ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ನೀವು ಒಟಿಪಿ ನೀಡಿದರೆ ಸಾಕು.
2.0 ಜಾರಿಯ ಉದ್ದೇಶವೇನು?
ಗ್ರಾಹಕರು ಪ್ರತಿ ಬಾರಿಯೂ ಬೇರೆ ಬೇರೆ ಸಂಸ್ಥೆಗಳಿಗೆ ದಾಖಲೆಗಳನ್ನು ಒದಗಿಸುವ ಅಡಚಣೆಯನ್ನು ತಪ್ಪಿಸಲು ಮತ್ತು ಈ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಆರ್ಥಿಕ ವಲಯದಲ್ಲಿ ಡಿಜಿಟಲೀಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿವಿಧ ಹಣಕಾಸು ಸಂಸ್ಥೆಗಳು ಗ್ರಾಹಕರ ಮಾಹಿತಿಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಲು ಒಂದು ಕೇಂದ್ರೀಕೃತ ಪ್ಲಾಟ್ ಫಾರ್ಮ್ ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ.
ಇದನ್ನೂ ಓದಿ : ಸಚಿವ ಸಂಪುಟ ಕ್ಲೈಮ್ಯಾಕ್ಸ್.. 20 ಜನರಿಗೆ ಮಂತ್ರಿಗಿರಿ? ಪ್ರಮಾಣ ವಚನಕ್ಕೂ ಡೇಟ್ ಫಿಕ್ಸ್!


















