ನವದೆಹಲಿ : ದೆಹಲಿಯಲ್ಲಿ ಅತ್ಯಂತ ಅಪರೂಪದ ವೈದ್ಯಕೀಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸಂತಾನಹೀನತೆ ಸಮಸ್ಯೆ (Infertility) ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ 24 ವರ್ಷದ ಯುವಕನ ದೇಹದೊಳಗೆ ಪೂರ್ಣವಾಗಿ ಬೆಳೆದ ಗರ್ಭಕೋಶ (Uterus) ಮತ್ತು ಹೊಟ್ಟೆಯ ಭಾಗದಲ್ಲಿ ವೃಷಣಗಳು ಇರುವುದು ಪತ್ತೆಯಾಗಿದೆ. ಸಾಮಾನ್ಯ ಪುರುಷ ಲಕ್ಷಣಗಳನ್ನು ಹೊಂದಿದ್ದ ಈ ಯುವಕನಿಗೆ ಪರೀಕ್ಷೆ ನಡೆಸಿದಾಗ ಈ ಅಚ್ಚರಿಯ ಸತ್ಯ ಹೊರಬಿದ್ದಿದೆ.
ಯುವಕನಿಗೆ ಸಂತಾನೋತ್ಪತ್ತಿ ಸಮಸ್ಯೆ ಇದ್ದ ಕಾರಣ ಆತ ರಾಜೌರಿ ಗಾರ್ಡನ್‌ನ ಆರ್‌ಜಿ ಆಸ್ಪತ್ರೆಯ ಮುಖ್ಯ ಮೂತ್ರಶಾಸ್ತ್ರಜ್ಞ ಡಾ. ಸುಶೀಲ್ ಖರಬಂದಾ ಅವರನ್ನು ಸಂಪರ್ಕಿಸಿದ್ದ. ಪ್ರಾಥಮಿಕ ಪರೀಕ್ಷೆಯ ವೇಳೆ ಆತನ ವೃಷಣಗಳು (Testes) ಹೊರಭಾಗದಲ್ಲಿ ಇಲ್ಲದಿರುವುದು ಮತ್ತು ವೀರ್ಯ ಪರೀಕ್ಷೆಯಲ್ಲಿ ವೀರ್ಯಾಣುಗಳ ಸಂಖ್ಯೆ ಶೂನ್ಯ (Azoospermia) ಆಗಿರುವುದು ಕಂಡುಬಂದಿತ್ತು. ವೈದ್ಯರು ತಕ್ಷಣವೇ ಕ್ರೋಮೋಸೋಮ್ ಹಾಗೂ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ, ಆತನ ದೇಹದಲ್ಲಿದ್ದ XY ಪುರುಷ ಕ್ರೋಮೋಸೋಮ್‌ಗಳ ನಡುವೆಯೂ ಸಂಪೂರ್ಣವಾಗಿ ರೂಪುಗೊಂಡ ಗರ್ಭಕೋಶ ಮತ್ತು ಅಂಡಾಶಯಗಳಂತೆ ಕಾಣುವ ವೃಷಣಗಳು ಹೊಟ್ಟೆಯ ಭಾಗದಲ್ಲೇ ಇರುವುದು ಕಂಡುಬಂದು ವೈದ್ಯರನ್ನೇ ಬೆರಗುಗೊಳಿಸಿತು.
ಏನಿದು ಪಿಎಂಡಿಎಸ್ (PMDS) ವೈದ್ಯಕೀಯ ಸ್ಥಿತಿ?
ವೈದ್ಯಕೀಯ ತಜ್ಞರ ಪ್ರಕಾರ, ಈ ಅಪರೂಪದ ಸ್ಥಿತಿಯನ್ನು ‘ಪರ್ಸಿಸ್ಟೆಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್’ (PMDS) ಎಂದು ಕರೆಯಲಾಗುತ್ತದೆ. ಭ್ರೂಣದ ಬೆಳವಣಿಗೆಯ ಹಂತದಲ್ಲಿ ಆಂಟಿ-ಮುಲ್ಲೇರಿಯನ್ ಹಾರ್ಮೋನ್ (AMH) ಸರಿಯಾಗಿ ಉತ್ಪತ್ತಿಯಾಗದಿದ್ದರೆ ಅಥವಾ ದೇಹವು ಅದಕ್ಕೆ ಸ್ಪಂದಿಸದಿದ್ದರೆ, ಪುರುಷರಲ್ಲಿ ಗರ್ಭಕೋಶ ಮತ್ತು ಫಾಲೋಪಿಯನ್ ಟ್ಯೂಬ್‌ಗಳಂತಹ ಅಂಗಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಜಗತ್ತಿನಾದ್ಯಂತ ಕೆಲವೇ ನೂರು ಜನರಲ್ಲಿ ಮಾತ್ರ ಕಂಡುಬಂದಿರುವ ಈ ಅಪರೂಪದ ಸ್ಥಿತಿಯಿಂದಾಗಿ ವೃಷಣಗಳು ದೇಹದ ಒಳಗೇ ಉಳಿದು, ತಾಪಮಾನ ಹೆಚ್ಚಳದಿಂದಾಗಿ ವೀರ್ಯಾಣು ಉತ್ಪತ್ತಿಯಾಗದೆ ಫಲವತ್ತತೆಯ ಸಮಸ್ಯೆ ಎದುರಾಗುತ್ತದೆ.
ಕ್ಯಾನ್ಸರ್ ಅಪಾಯ ತಪ್ಪಿಸಲು ಶಸ್ತ್ರಚಿಕಿತ್ಸೆ
ದೇಹದ ಒಳಗಿರುವ ಈ ವೃಷಣಗಳು ಮುಂದೆ ಕ್ಯಾನ್ಸರ್ ಆಗಿ ಮಾರ್ಪಡುವ ಸಾಧ್ಯತೆಗಳು ಹೆಚ್ಚಿರುವುದರಿಂದ ಡಾ. ಸುಶೀಲ್ ಖರಬಂದಾ ನೇತೃತ್ವದ ವೈದ್ಯರ ತಂಡವು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಕೋಶ ಮತ್ತು ವೃಷಣಗಳನ್ನು ಯಶಸ್ವಿಯಾಗಿ ತೆಗೆದುಹಾಕಿದೆ. ಬಯಾಪ್ಸಿ ವರದಿಯಲ್ಲೂ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಿರುವುದು ಖಚಿತಪಟ್ಟಿದ್ದು, ಸಕಾಲದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯಿಂದ ಯುವಕನಿಗೆ ಎದುರಾಗಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದಂತಾಗಿದೆ.
ಇದನ್ನೂ ಓದಿ : ಇತಿಹಾಸ ಬರೆದ ಶ್ರೀ ಚರಣಿ ; ಕೇವಲ 29 ಪಂದ್ಯಗಳಲ್ಲಿ 50 ಟಿ20 ವಿಕೆಟ್‌ಗಳ ಸಾಧನೆ!



















