ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಹೇಗೆ ತಲುಪಿತು ಎಂಬುದರ ಕುರಿತ ತನಿಖೆಯಲ್ಲಿ ಹಲವು ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಜೈಲಿನಲ್ಲಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಒದಗಿಸಿದ ಆರೋಪದ ಮೇಲೆ ಕಾರಾಗೃಹ ವಾರ್ಡನ್ ಪ್ರಕಾಶ್ ಗಾವ್ಡೇ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಆರೋಪಿ ತೌಸಿಫ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಹಣದಾಸೆಗೆ ಕಾರಾಗೃಹ ವಾರ್ಡನ್ ಪ್ರಕಾಶ್ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಒದಗಿಸಲು ನೆರವಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎನ್ನಲಾಗಿದೆ. ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಆರೋಪಿ ತೌಸಿಫ್‌ನಿಂದ ಮೊಬೈಲ್ ಪಡೆದು ಪ್ರಜ್ವಲ್ ಬಳಸುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದೆ. ಜೈಲಿನೊಳಗೆ ಮೊಬೈಲ್ ತಲುಪಿಸುವಲ್ಲಿ ವಾರ್ಡನ್ ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಜ್ವಲ್ ರೇವಣ್ಣ ಬಳಸಿದ್ದ ಮೊಬೈಲ್‌ನಲ್ಲಿದ್ದ ಸಿಮ್ ಕಾರ್ಡ್ ಅನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಖರೀದಿಸಲಾಗಿತ್ತು ಎನ್ನಲಾಗಿದೆ. ಮೊಬೈಲ್‌ನ್ನು ಪೊಲೀಸರು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿದ್ದು, ಮೊಬೈಲ್‌ನಲ್ಲಿದ್ದ ದತ್ತಾಂಶ ಪರಿಶೀಲನೆ ವೇಳೆ ಹಲವು ಅಂಶಗಳು ಬೆಳಕಿಗೆ ಬಂದಿವೆ. ಮೊಬೈಲ್‌ಗಾಗಿ ಪ್ರಜ್ವಲ್ ರೇವಣ್ಣ ಒಂದು ಲಕ್ಷ ರೂಪಾಯಿ ನೀಡಿದ್ದರೆ, ಸಿಮ್ ಕಾರ್ಡ್ ಖರೀದಿಗೆ 50 ಸಾವಿರ ರೂಪಾಯಿ ಪಾವತಿಸಿದ್ದರು ಎನ್ನಲಾಗಿದೆ.
ಎಫ್‌ಎಸ್‌ಎಲ್ ಪರಿಶೀಲನೆ ವೇಳೆ ಪ್ರಜ್ವಲ್ ಬಳಸಿದ್ದ ಮೊಬೈಲ್‌ನಲ್ಲಿ ಬರೋಬ್ಬರಿ 173 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಪೈಕಿ ಪ್ರಜ್ವಲ್ ರೇವಣ್ಣ ಅವರದ್ದೇ ಎನ್ನಲಾದ ಮೂರು ವಿಡಿಯೋಗಳು ಕೂಡ ಪತ್ತೆಯಾಗಿವೆ ಎಂದು ತನಿಖಾ ಮೂಲಗಳಿಂದ ತಿಳಿದುಬಂದಿದೆ. ಜೈಲಿನಲ್ಲಿದ್ದಾಗ ಪ್ರಜ್ವಲ್ ತಮ್ಮ ಮೊಬೈಲ್‌ನಲ್ಲಿ ಸ್ವಂತ ವಿಡಿಯೋಗಳನ್ನು ನೋಡುತ್ತಿದ್ದರು ಎನ್ನಲಾಗಿದ್ದು, ಇದೇ ಮೊಬೈಲ್ ಮೂಲಕ ಹಲವು ಯುವತಿಯರಿಗೆ ಕರೆ ಮಾಡಿರುವುದು ಕೂಡ ತನಿಖೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಮೊಬೈಲ್‌ನ್ನು ಜೈಲಿನೊಳಗೆ ತಲುಪಿಸಿದ ಜೈಲು ವಾರ್ಡನ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಮೊಬೈಲ್ ಬಳಕೆ, ಹಣದ ವಹಿವಾಟು ಹಾಗೂ ಜೈಲಿನೊಳಗೆ ಮೊಬೈಲ್ ತಲುಪಿದ ಸಂಪೂರ್ಣ ಜಾಲದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ ; ಕೇಂದ್ರ ಸರ್ಕಾರದ TNPL ಸಂಸ್ಥೆಯಲ್ಲಿ 5 ಹುದ್ದೆಗಳ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ



















