ಬೆಂಗಳೂರು : ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆಯ ಬೆನ್ನಲ್ಲೇ ರಾಜ್ಯ ಸರ್ಕಾರವು ಮತ್ತೊಂದು ಪ್ರಮುಖ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಆರಂಭಿಸಿದೆ. ಗೃಹಲಕ್ಷ್ಮಿ ಯೋಜನೆಯ ಮರು ಪರಿಶೀಲನೆಯು ಆಗಸ್ಟ್ 30ರಿಂದ ಆರಂಭವಾಗಿದ್ದು, ಫಲಾನುಭವಿಗಳ (Gruha Lakshmi Beneficiaries) ಮನೆ ಬಾಗಿಲಿಗೆ ಗ್ಯಾರಂಟಿ ಸಮಿತಿ ಸದಸ್ಯರು ಆಗಮಿಸಲಿದ್ದಾರೆ. ಅವರು ತಂದ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಯೋಜನೆಯ ಪ್ರಯೋಜನವನ್ನು ಮುಂದುವರಿಸಬಹುದಾಗಿದೆ.
ಯಾವೆಲ್ಲ ದಾಖಲೆ ನೀಡಬೇಕು?
ಮನೆಯ ಯಜಮಾನಿಯರು ಗ್ಯಾರಂಟಿ ಸಮಿತಿ ಸದಸ್ಯರು ಅಥವಾ ಸಿಬ್ಬಂದಿಗೆ ಹಲವು ದಾಖಲೆಗಳನ್ನು ನೀಡಬೇಕು. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಮತ್ತು ಆಧಾರ್ ಪ್ರತಿ, ಎಪಿಎಲ್ ಅಥವಾ ಬಿಪಿಎಲ್ ರೇಷನ್ ಕಾರ್ಡ್, ಹಣ ಜಮೆಯಾಗುವ ಬ್ಯಾಂಕ್ ಖಾತೆ ಡಿಟೇಲ್ಸ್, ವೋಟರ್ ಐಡಿ, ಮೊಬೈಲ್ ನಂಬರ್ ನೀಡಬೇಕು. ಹಾಗೆಯೇ, ಫಲಾನುಭವಿಗಳು ಮೃತಪಟ್ಟಿದ್ದರೆ, ವಲಸೆ ಹೋಗಿದ್ದರೆ, ಸ್ಥಳಾಂತರಗೊಂಡಿದ್ದರೆ ಗಣತಿದಾರರಿಗೆ ವಿವರ ನೀಡಬೇಕು.
ವಾಸಿಸುತ್ತಿರುವ ಮನೆ ಮ್ಯಾಪಿಂಗ್, ಬಯೋಮೆಟ್ರಿಕ್ ಅನ್ನು ಗಣತಿದಾರರು ಸ್ಥಳದಲ್ಲಿಯೇ ಮೊಬೈಲ್ ಆ್ಯಪ್ ಮೂಲಕ ಮಾಡಲಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಗ್ಯಾರಂಟಿ ಸಮಿತಿ ಸದಸ್ಯರು ಅಥವಾ ಸರ್ಕಾರದ ವಿವಿಧ ಇಲಾಖೆ ಸಿಬ್ಬಂದಿ ತಮ್ಮ ವ್ಯಾಪ್ತಿಯ ಫಲಾನುಭವಿಗಳ ಮನೆಗಳಿಗೆ ಬಂದು ಮಾಹಿತಿ ಪಡೆಯುವುದರಿಂದ ಯಜಮಾನಿಯರು ಸುಲಭವಾಗಿ ಮರುಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಅಧಿಕಾರಿಗಳು ಮನೆಗೆ ಬರದಿದ್ದರೆ ಅಥವಾ ಅವರು ಬಂದಾಗ ಮನೆಯ ಯಜಮಾನಿಯರು ಮನೆಯಲ್ಲಿ ಇರದಿದ್ದರೆ ಸ್ಥಳೀಯ ನ್ಯಾಯಬೆಲೆ ಅಂಗಡಿ, ಗ್ರಾಮ್ ಒನ್, ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಂದು ತಿಂಗಳು ಯೋಜನೆಯ ಮರುಪರಿಶೀಲನೆ ಮಾಡಲಾಗುತ್ತದೆ. ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಇದುವರೆಗೆ ಯೋಜನೆ ಅಡಿಯಲ್ಲಿ 1.24 ಕೋಟಿ ಮಹಿಳೆಯರಿಗೆ ಒಟ್ಟು 32 ಕಂತುಗಳಲ್ಲಿ ಹಣ ಜಮೆ ಮಾಡಲಾಗಿದೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ 100 ವರ್ಷ ಹಳೆಯ ಹಿಂದೂ ದೇವಾಲಯ ಧ್ವಂಸ : ಮದರಸಾ ವಿಸ್ತರಣೆಗೆ ಜಾಗ ಒತ್ತುವರಿ ಆರೋಪ



















