ಬೆಂಗಳೂರು : ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣ Xನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಲ್ಲಸಲ್ಲದ ವಿವಾದಗಳನ್ನು ಸೃಷ್ಟಿಸುವುದನ್ನು ಬಿಟ್ಟು ತಮ್ಮ ಇಲಾಖೆಯ ಕಡೆ ಗಮನ ಹರಿಸಬೇಕು ಎಂದು ಟೀಕಿಸಿರುವ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಡ್ರಗ್ಸ್ ಜಾಲ ಆರು ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

2024ರಲ್ಲಿ 36 ವಿದ್ಯಾರ್ಥಿಗಳು ಮಾದಕ ವಸ್ತು ಜಾಲದಲ್ಲಿ ಸಿಲುಕಿಕೊಂಡಿದ್ದರೆ, 2026ರ ಜುಲೈ ವೇಳೆಗೆ ಈ ಸಂಖ್ಯೆ 228ಕ್ಕೆ ಏರಿಕೆಯಾಗಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಡ್ರಗ್ ಪೆಡ್ಲರ್‌ಗಳಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳನ್ನು ಡ್ರಗ್ಸ್ ಜಾಲಕ್ಕೆ ಎಳೆಯುತ್ತಿದ್ದರೆ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿರುವ ಆರ್. ಅಶೋಕ್, ಯುವಜನತೆಯ ಭವಿಷ್ಯವನ್ನು ಗಾಂಜಾ ಮಾಫಿಯಾಗೆ ಬಲಿಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡ್ರಗ್ಸ್ ಜಾಲವನ್ನು ಮಟ್ಟಹಾಕಲು ದಕ್ಷ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಬೇಕು. ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡು ಯುವಕರ ಭವಿಷ್ಯವನ್ನು ರಕ್ಷಿಸಬೇಕು. ಇದನ್ನು ಮಾಡಲು ಕೈಲಾಗದಿದ್ದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆರ್. ಅಶೋಕ್ ಪ್ರಿಯಾಂಕ್ ಖರ್ಗೆ ವಿರುದ್ದ ಗುಡುಗಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದ ಹಣ ವಾಪಸ್‌ಗೆ ಬಿಜೆಪಿ ಆಗ್ರಹ : 2028ರ ಗುರಿಯೊಂದಿಗೆ ಇಂದಿನಿಂದ ‘ಬಳ್ಳಾರಿ ಚಲೋ’ ಪಾದಯಾತ್ರೆ


















