ನವದೆಹಲಿ : ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ವೇಳೆ ತನ್ನ ವಿಶಿಷ್ಟ ವಿಡಿಯೋಗಳ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಯುವಕ, ಕಂಟೆಂಟ್ ಕ್ರಿಯೇಟರ್ ಅಭಿನವ್ ಬಿಷ್ಟ್ ಅವರ ನಿಷೇಧಕ್ಕೊಳಗಾಗಿದ್ದ ಇನ್‌ಸ್ಟಾಗ್ರಾಮ್ ಖಾತೆಯನ್ನು ಮೆಟಾ ಸಂಸ್ಥೆ ಕೊನೆಗೂ ಮರುಸ್ಥಾಪಿಸಿದೆ. ದಿಢೀರ್ ಖಾತೆ ಅಮಾನತಿನಿಂದ ಆತಂಕಗೊಂಡಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಈ ಬೆಳವಣಿಗೆಯಿಂದ ಸಮಾಧಾನ ತಂದಿದ್ದು, ಖಾತೆ ವಾಪಸ್ ಸಿಕ್ಕ ಬೆನ್ನಲ್ಲೇ ಅಭಿನವ್ ಹಂಚಿಕೊಂಡ ಭಾವುಕ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರಾತ್ರೋರಾತ್ರಿ ಲಕ್ಷಾಂತರ ಫಾಲೋವರ್ಸ್
ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಯುವಜನರ ಪ್ರತಿಭಟನೆಯನ್ನು Gen Z ಶೈಲಿಯಲ್ಲಿ, ತಮಾಷೆಯ ರೀಲ್ಸ್ ಹಾಗೂ ಸಂದರ್ಶನಗಳ ಮೂಲಕ ಅಭಿನವ್ ಬಿಷ್ಟ್ ಕವರ್ ಮಾಡುತ್ತಿದ್ದರು. ಸಾಂಪ್ರದಾಯಿಕ ಸುದ್ದಿಗಳಿಗಿಂತ ವಿಭಿನ್ನವಾಗಿದ್ದ ಇವರ ವಿಡಿಯೋಗಳಿಗೆ ಯುವಜನತೆ ಫಿದಾ ಆಗಿದ್ದರು. ಪರಿಣಾಮವಾಗಿ, ಕೇವಲ ಎರಡೇ ದಿನಗಳಲ್ಲಿ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 5,000 ದಿಂದ ಬರೋಬ್ಬರಿ 6,35,000ಕ್ಕೆ ಏರಿಕೆಯಾಗಿತ್ತು. ಆದರೆ, ಖಾತೆ 6.35 ಲಕ್ಷ ಗಡಿ ದಾಟುತ್ತಿದ್ದಂತೆ ಯಾವುದೇ ಮುನ್ಸೂಚನೆ ನೀಡದೆ ಮೆಟಾ ಸಂಸ್ಥೆ ಅವರ ಪ್ರೊಫೈಲ್ ಅನ್ನು ಏಕಾಏಕಿ ಸಸ್ಪೆಂಡ್ ಮಾಡಿತ್ತು.
“ನಿನ್ನೆಯಿಂದ ನಿದ್ದೆಯೇ ಮಾಡಿಲ್ಲ”: ಭಾವನಾತ್ಮಕ ಧನ್ಯವಾದ
ಇನ್‌ಸ್ಟಾಗ್ರಾಮ್ ಖಾತೆ ಮರಳಿ ಸಿಕ್ಕ ತಕ್ಷಣ ಹೊಸ ವಿಡಿಯೋ ಹಂಚಿಕೊಂಡಿರುವ ಅಭಿನವ್, “ನನ್ನ ಖಾತೆ ಕೊನೆಗೂ ವಾಪಸ್ ಬಂದಿದೆ. ನನ್ನ ಮುಖ ನೋಡಿದರೆ ನಿಮಗೆ ಗೊತ್ತಾಗಬಹುದು, ನಾನು ನಿನ್ನೆಯಿಂದ ಸರಿಯಾಗಿ ನಿದ್ದೆಯೇ ಮಾಡಿಲ್ಲ. ನನಗಾಗಿ ಪ್ರಾರ್ಥಿಸಿದ, ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪ್ರೀತಿಯಿಂದಾಗಿಯೇ ಖಾತೆ ಮರುಸ್ಥಾಪನೆಯಾಗಿದೆ,” ಎಂದು ಭಾವುಕರಾಗಿ ನುಡಿದಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ಸುಮಾರು 1 ಕೋಟಿಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ
ಆನ್‌ಲೈನ್ ಕಾಲೇಜು ಶಿಕ್ಷಣದ ಜೊತೆಗೆ ಲೈವ್ ಸ್ಟ್ರೀಮಿಂಗ್ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿನವ್ ಬಿಷ್ಟ್ ಖಾತೆ ಮರುಸ್ಥಾಪನೆಗೊಳ್ಳುತ್ತಿದ್ದಂತೆ, ಅವರ ಅಭಿಮಾನಿಗಳು ಮತ್ತು ಯುವ ಸಮುದಾಯ ಸಂಭ್ರಮಿಸಿದೆ. “ಕೊನೆಗೂ ಇನ್‌ಸ್ಟಾಗ್ರಾಮ್‌ಗೆ ಬುದ್ಧಿ ಬಂತು” ಎಂದು ಕಾಮೆಂಟ್ ಮಾಡುವ ಮೂಲಕ ನೆಟ್ಟಿಗರು ಮೆಟಾ ನಿರ್ಧಾರವನ್ನು ಸ್ವಾಗತಿಸಿದ್ದು, ಯುವ ಹೋರಾಟದ ದ್ವನಿಯಾಗಿದ್ದ ಕ್ರಿಯೇಟರ್‌ಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಇದನ್ನೂ ಓದಿ : ‘ಮಾತು ತಪ್ಪಿದ್ರೆ ನಿಮ್ಮ ವಿರುದ್ಧವೂ ಹೋರಾಟ’ : ರಾಹುಲ್ ಗಾಂಧಿಗೆ CJP ಪ್ರತಿಭಟನೆಯ ಸೆನ್ಸೇಷನ್ ‘ಇರ್ಫಾನ್’ ಎಚ್ಚರಿಕೆ!



















