ನವದೆಹಲಿ : ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಬಾಂಧವ್ಯದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸ್ಥಾಪನೆಯಾಗಿದೆ. ದೆಹಲಿಯಲ್ಲಿ ಇಂದಿನಿಂದ 2 ದಿನಗಳ ಕಾಲ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ ಆಗಮಿಸುತ್ತಿರುವಂತೆಯೇ ಉಭಯ ದೇಶಗಳ ನಡುವಿನ ವೈಮಾನಿಕ ಸಂಪರ್ಕ ಮತ್ತಷ್ಟು ಬಲಗೊಂಡಿದೆ. ಚೀನಾ ಸದರ್ನ್ ಏರ್‌ಲೈನ್ಸ್ ಸುಮಾರು ಆರು ವರ್ಷಗಳ ಸುದೀರ್ಘ ವಿರಾಮದ ನಂತರ ಗುವಾಂಗ್‌ಝೌ ಮತ್ತು ನವದೆಹಲಿ ನಡುವೆ ನೇರ ಪ್ರಯಾಣಿಕ ವಿಮಾನ ಸೇವೆಯನ್ನು ಪುನರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.
ವೈಮಾನಿಕ ಸಂಪರ್ಕಕ್ಕೆ ಹೊಸ ಉತ್ತೇಜನ
ಸೆಪ್ಟೆಂಬರ್ 21 ರಿಂದ ಗುವಾಂಗ್‌ಝೌ-ನವದೆಹಲಿ ಮಾರ್ಗದಲ್ಲಿ ನಿಯಮಿತ ವಿಮಾನ ಸೇವೆಗಳು ಆರಂಭವಾಗಲಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಈ ಹೊಸ ಮಾರ್ಗದ ಆರಂಭದೊಂದಿಗೆ, ದಕ್ಷಿಣ ಏಷ್ಯಾದಾದ್ಯಂತ ಚೀನಾ ಸದರ್ನ್ ಏರ್‌ಲೈನ್ಸ್ ನಿರ್ವಹಿಸುವ ಸುತ್ತು-ರೌಂಡ್ ಟ್ರಿಪ್ ವಿಮಾನಗಳ ಸಂಖ್ಯೆ ವಾರಕ್ಕೆ 100ಕ್ಕೂ ಹೆಚ್ಚು ದಾಟಲಿದೆ. 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ಹಾಗೂ ಡೋಕ್ಲಾಂ ಮತ್ತು ಗಾಲ್ವಾನ್ ಕಣಿವೆ ಗಡಿ ಸಂಘರ್ಷಗಳಿಂದಾಗಿ ಎರಡು ದೇಶಗಳ ನಡುವಿನ ವಿಮಾನ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ವರ್ಷ ಎರಡೂ ರಾಷ್ಟ್ರಗಳು ಹಂತ-ಹಂತವಾಗಿ ವಿಮಾನ ಸೇವೆಗಳನ್ನು ಮರುಪ್ರಾರಂಭಿಸಲು ಗಂಭೀರ ಕ್ರಮಗಳನ್ನು ಕೈಗೊಂಡಿವೆ.
ಇದಕ್ಕೂ ಮುನ್ನ, 2026ರ ಫೆಬ್ರವರಿಯಲ್ಲಿ ಏರ್ ಇಂಡಿಯಾ ನವದೆಹಲಿ ಮತ್ತು ಚೀನಾ ನಡುವೆ ತನ್ನ ಸೇವೆಯನ್ನು ಪುನರಾರಂಭಿಸಿತ್ತು. ನಂತರ ಏಪ್ರಿಲ್‌ನಲ್ಲಿ ಏರ್ ಚೀನಾ ಸಂಸ್ಥೆಯು ಬೀಜಿಂಗ್-ದೆಹಲಿ ಮಾರ್ಗದಲ್ಲಿ ವಿಮಾನ ಸಂಚಾರವನ್ನು ಸಕ್ರಿಯಗೊಳಿಸಿತು. ಜೊತೆಗೆ, ಚೀನಾ ಈಸ್ಟರ್ನ್ ಏರ್‌ಲೈನ್ಸ್ ಕುನ್ಮಿಂಗ್ ಮತ್ತು ಕೋಲ್ಕತ್ತಾ ನಡುವೆ ಹಾಗೂ ಇಂಡಿಗೋ ಸಂಸ್ಥೆಯು ಕೋಲ್ಕತ್ತಾ-ಶಾಂಘೈ ಮತ್ತು ಗುವಾಂಗ್‌ಝೌ ಮಾರ್ಗಗಳಲ್ಲಿ ವಿಮಾನ ಸೇವೆಯನ್ನು ಆರಂಭಿಸುವ ಮೂಲಕ ಎರಡೂ ದೇಶಗಳ ನಡುವಿನ ವ್ಯಾಪಾರ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದ್ದವು.
ಇಂದು ನವದೆಹಲಿಯಲ್ಲಿ ಮೋದಿ-ಜಿನ್‌ಪಿಂಗ್ ನಿರ್ಣಾಯಕ ಭೇಟಿ
ಈ ಪ್ರಮುಖ ಬೆಳವಣಿಗೆಗಳ ನಡುವೆಯೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾದಿಂದ ಹೊರಟಿದ್ದು, ಇಂದು ಮಧ್ಯಾಹ್ನ ನವದೆಹಲಿಗೆ ತಲುಪಲಿದ್ದಾರೆ. 2020ರ ಗಾಲ್ವಾನ್ ಸಂಘರ್ಷದ ನಂತರ ಜಿನ್‌ಪಿಂಗ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಸಂಜೆ 5.45ಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷರ ನಡುವೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಯಲಿದ್ದು, ಗಡಿ ವಿವಾದ ನಿರ್ವಹಣೆ ಹಾಗೂ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಯ ಕುರಿತು ಸುದೀರ್ಘ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಜಿನ್‌ಪಿಂಗ್ ಅವರೊಂದಿಗೆ ಚೀನಾದ ಪ್ರಭಾವಿ ರಾಜತಾಂತ್ರಿಕ ನಾಯಕರಾದ ಕೈ ಚೀ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಕೂಡ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ : ‘ಇಂಥ ದೊಡ್ಡ ಕ್ರಿಕೆಟಿಗನಾದರೂ ಸರಳ ವ್ಯಕ್ತಿ’ ; ಲಂಡನ್‌ನಲ್ಲಿ ಕೊಹ್ಲಿಯನ್ನು ಭೇಟಿಯಾದ ಏಕನಾಥ್ ಶಿಂಧೆ!



















