ನವದೆಹಲಿ : ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ (IWT) ಸಂಬಂಧಿಸಿದಂತೆ ಹೇಗ್‌ನ ಮಧ್ಯಸ್ಥಿಕೆ ನ್ಯಾಯಾಲಯ (CoA) ನೀಡಿರುವ ತೀರ್ಪನ್ನು ಭಾರತ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ಕಾನೂನುಬಾಹಿರವಾಗಿ ರಚನೆಯಾಗಿರುವ ಈ ನ್ಯಾಯಾಲಯಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಿರುವ ಭಾರತ, ಅದರ ಆದೇಶಗಳು ‘ಅಸಿಂಧು’ ಎಂದು ಘೋಷಿಸಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವವರೆಗೂ ಈ ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರ ಮುಂದುವರಿಯಲಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಮೇ 15ರಂದು ಮಧ್ಯಸ್ಥಿಕೆ ನ್ಯಾಯಾಲಯವು ಗರಿಷ್ಠ ಜಲಸಂಗ್ರಹಣೆಗೆ ಸಂಬಂಧಿಸಿದಂತೆ ನೀಡಿರುವ ಪೂರಕ ತೀರ್ಪಿನ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಕಾನೂನುಬಾಹಿರವಾಗಿ ಅಸ್ತಿತ್ವಕ್ಕೆ ಬಂದಿರುವ ಈ ನ್ಯಾಯಾಲಯದ ಹಿಂದಿನ ಎಲ್ಲಾ ಘೋಷಣೆಗಳನ್ನು ಭಾರತ ಹೇಗೆ ತಿರಸ್ಕರಿಸುತ್ತಾ ಬಂದಿದೆಯೋ, ಅದೇ ರೀತಿ ಈ ಹೊಸ ಆದೇಶವನ್ನೂ ಸಂಪೂರ್ಣವಾಗಿ ತಳ್ಳಿಹಾಕುತ್ತದೆ ಎಂದು ಅವರು ಹೇಳಿದ್ದಾರೆ. ಮಧ್ಯಸ್ಥಿಕೆ ನ್ಯಾಯಾಲಯದ ಸ್ಥಾಪನೆಯನ್ನೇ ಭಾರತ ಎಂದಿಗೂ ಒಪ್ಪಿಲ್ಲ. ಹೀಗಾಗಿ ಅದರ ಯಾವುದೇ ನಡಾವಳಿಗಳು, ತೀರ್ಪುಗಳು ಅಥವಾ ನಿರ್ಧಾರಗಳು ಕಾನೂನುಬದ್ಧವಾಗಿ ಅಸಿಂಧುವಾಗುತ್ತವೆ ಎಂದು ಭಾರತ ಸ್ಪಷ್ಟಪಡಿಸಿದೆ.
ಒಪ್ಪಂದ ಅಮಾನತಿಗೆ ಪಹಲ್ಗಾಮ್ ದಾಳಿಯೇ ಕಾರಣ
ಭಾರತ ಮತ್ತು ಪಾಕಿಸ್ತಾನ ನಡುವೆ 1960 ರ ಸೆಪ್ಟೆಂಬರ್ 19 ರಂದು ಸಿಂಧೂ ಜಲಾನಯನ ಪ್ರದೇಶದ ನದಿಗಳ ನೀರನ್ನು ಬಳಸಿಕೊಳ್ಳುವ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಕಳೆದ ವರ್ಷ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ, ಭಾರತವು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತನ್ನ ಸಾರ್ವಭೌಮ ಹಕ್ಕನ್ನು ಚಲಾಯಿಸಿ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿತ್ತು. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೂ ಈ ಅಮಾನತು ಆದೇಶ ಜಾರಿಯಲ್ಲಿರಲಿದೆ ಎಂದು ಭಾರತ ಈ ಹಿಂದೆಯೇ ಎಚ್ಚರಿಸಿತ್ತು.
ಪಾಕಿಸ್ತಾನದ ತಂತ್ರಗಳಿಗೆ ಭಾರತದ ತಪರಾಕಿ
ಒಪ್ಪಂದವು ಅಮಾನತಿನಲ್ಲಿರುವವರೆಗೆ, ಅದಕ್ಕೆ ಸಂಬಂಧಿಸಿದ ಯಾವುದೇ ಜವಾಬ್ದಾರಿಗಳನ್ನು ಪಾಲಿಸಲು ಭಾರತ ಬದ್ಧವಾಗಿರುವುದಿಲ್ಲ. ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಇಂತಹ ಯಾವುದೇ ಮಧ್ಯಸ್ಥಿಕೆ ಮಂಡಳಿಗೆ ಭಾರತದ ಸಾರ್ವಭೌಮ ನಿರ್ಧಾರಗಳ ಕಾನೂನುಬದ್ಧತೆಯನ್ನು ಪರಿಶೀಲಿಸುವ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ವಿದೇಶಾಂಗ ಇಲಾಖೆ ಈ ಹಿಂದೆ ಜೂನ್ 2025 ರಲ್ಲೇ ಸ್ಪಷ್ಟಪಡಿಸಿತ್ತು. ಜಮ್ಮು ಕಾಶ್ಮೀರದ ಕಿಶನ್‌ಗಂಗಾ ಮತ್ತು ರಾಟಲ್ ಜಲವಿದ್ಯುತ್ ಯೋಜನೆಗಳ ಕುರಿತು ಈ ನ್ಯಾಯಾಲಯ ನಡೆಸುತ್ತಿರುವ ನಡಾವಳಿಗಳು ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ತನ್ನ ಮುಖವಾಡವನ್ನು ಮರೆಮಾಚಲು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪಾಕಿಸ್ತಾನವು ಅಂತಾರಾಷ್ಟ್ರೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ : ನಾನು ಅಷ್ಟು ಕೀಳು ಮಟ್ಟದವನಲ್ಲ, ಸಿಎಂ ವಿಜಯ್ ಬಗ್ಗೆ ಹೊಟ್ಟೆಕಿಚ್ಚಿಲ್ಲ : ರಜನಿಕಾಂತ್ ಸ್ಪಷ್ಟನೆ



















