ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಾಗಿರುವ ಡಿಜಿಟಲ್ ‘ಕಂಟೆಂಟ್ ಕ್ರಿಯೇಷನ್’ ಸಂಸ್ಕೃತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರಿಗೆ ವೈಯಕ್ತಿಕ ಸ್ವಾತಂತ್ರ್ಯವೇ ಇಲ್ಲದಂತೆ ಸದಾ ಕ್ಯಾಮೆರಾಗಳನ್ನು ಬೆನ್ನಿಗೆ ಕಟ್ಟಿಕೊಂಡು ಸುತ್ತುವ ಪ್ರವೃತ್ತಿ ತಮಗೆ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ಹಾಗೂ ಅಭ್ಯಾಸದ ವೇಳೆ ಆಟಗಾರರ ಖಾಸಗಿತನವನ್ನು ಕಸಿದುಕೊಳ್ಳುತ್ತಿರುವ ಈ ವಿಪರೀತ ಕ್ಯಾಮೆರಾ ಕಣ್ಗಾವಲಿನ ಬಗ್ಗೆ ಕೊಹ್ಲಿ ಆರ್‌ಸಿಬಿಯ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಮನದಾಳದ ಮತ್ತು ಕಟುವಾದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅಭ್ಯಾಸದ ವೇಳೆ ಆರು ಕ್ಯಾಮೆರಾಗಳ ಕಣ್ಗಾವಲು!
ಆಟಗಾರರ ಮೈದಾನದೊಳಗಿನ ಪ್ರದರ್ಶನವನ್ನು ಮೀರಿ ಅವರ ವೈಯಕ್ತಿಕ ಜೀವನ ಹಾಗೂ ಪ್ರತಿಯೊಂದು ನಡೆಯನ್ನೂ ಸೆರೆಹಿಡಿದು ಜಾಲತಾಣಗಳಲ್ಲಿ ಪ್ರಕಟಿಸುವ ಪ್ರವೃತ್ತಿ ಐಪಿಎಲ್‌ನಲ್ಲಿ ಇತ್ತೀಚೆಗೆ ವಿಪರೀತವಾಗಿದೆ. ಇದರ ಬಗ್ಗೆ ಮಾತನಾಡಿರುವ ಕೊಹ್ಲಿ, “ನಾನು ಪಂದ್ಯದ ಒತ್ತಡವನ್ನು ಇಷ್ಟಪಡುತ್ತೇನೆ. ಆದರೆ ಅದರಾಚೆಗಿನ ಬೇರಾವುದೇ ಒತ್ತಡವನ್ನು ನಾನು ಸಹಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಿಗಾಗಿ ವಿಪರೀತ ವಿಡಿಯೋ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನಾವು ಯೋಚಿಸಬೇಕು. ನಾವು ನೆಟ್ಸ್‌ನಲ್ಲಿ ಅಭ್ಯಾಸಕ್ಕೆ ಇಳಿದ ತಕ್ಷಣ ನಮ್ಮ ಹಿಂದೆ ಆರು ಕ್ಯಾಮೆರಾಗಳು ಬರುತ್ತವೆ. ಇದು ನಮಗೆ ಕಿರಿಕಿರಿ ಎನಿಸುತ್ತದೆ. ಒಬ್ಬ ಕ್ರೀಡಾಪಟುವಾಗಿ ನನ್ನ ಆಟವನ್ನು ಸುಧಾರಿಸಿಕೊಳ್ಳಲು ನನಗೆ ನೆಮ್ಮದಿಯ ವಾತಾವರಣ ಬೇಕು. ಆದರೆ, ನಾನು ಅಭ್ಯಾಸದಲ್ಲಿ ಮಾಡುವ ಪ್ರತಿಯೊಂದು ಸಣ್ಣ ವಿಚಾರವೂ ಕ್ಯಾಮೆರಾದಲ್ಲಿ ಸೆರೆಯಾಗಿ ಮರುದಿನ ಚರ್ಚೆಗೆ ಗ್ರಾಸವಾಗುತ್ತದೆ ಎಂಬ ಭಯದಲ್ಲಿಯೇ ಇದ್ದರೆ, ನಾನು ಹೇಗೆ ಸ್ವಾಭಾವಿಕವಾಗಿ ಹೊಸ ವಿಷಯಗಳನ್ನು ಕಲಿಯಲು ಸಾಧ್ಯ? ನನ್ನ ಆಟವನ್ನು ಪಂದ್ಯದ ಆಧಾರದ ಮೇಲೆ ಅಳೆಯಲಿ, ಆದರೆ ಅಭ್ಯಾಸದ ವಿಚಾರದಲ್ಲಿ ಜಡ್ಜ್ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಖಡಕ್ ಆಗಿ ನುಡಿದಿದ್ದಾರೆ.
ಕೇನ್ ವಿಲಿಯಮ್ಸನ್ ಹಾಗೂ ರೊಬೊಟಿಕ್ ಶ್ವಾನ ‘ಚಂಪಕ್’ ಕಿರಿಕಿರಿ
ಆಟಗಾರರ ನಡುವಿನ ಸಹಜ ಮಾತುಕತೆಗಳಿಗೂ ಈ ಕಂಟೆಂಟ್ ಸಂಸ್ಕೃತಿ ಅಡ್ಡಿಯಾಗುತ್ತಿದೆ ಎಂಬುದಕ್ಕೆ ಕೊಹ್ಲಿ ಒಂದು ನಿದರ್ಶನ ನೀಡಿದ್ದಾರೆ. ಇತ್ತೀಚೆಗೆ ಮೈದಾನದಲ್ಲಿ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರ ಜೊತೆ ಮಾತನಾಡುತ್ತಿದ್ದಾಗ ನಡೆದ ಘಟನೆಯನ್ನು ಅವರು ಹಂಚಿಕೊಂಡರು. “ನಾನು ಮತ್ತು ಕೇನ್ ವಿಲಿಯಮ್ಸನ್ ಬಹಳ ಹಿಂದಿನಿಂದಲೂ ಉತ್ತಮ ಸ್ನೇಹಿತರು. ಅಂಡರ್-19 ದಿನಗಳಿಂದಲೂ ನನಗೆ ಅವರ ಪರಿಚಯವಿದೆ. ಇತ್ತೀಚೆಗೆ ಮೈದಾನದಲ್ಲಿ ನಾವು ಇಬ್ಬರೂ ಗಂಭೀರವಾದ ವಿಷಯವೊಂದರ ಬಗ್ಗೆ ಮಾತನಾಡುತ್ತಿದ್ದೆವು. ಆಗ ಅಲ್ಲಿಗೆ ಪ್ರಸಾರಕರ ಪ್ರಚಾರದ ಭಾಗವಾಗಿರುವ ‘ಚಂಪಕ್’ ಹೆಸರಿನ ರೋಬೋಟ್ ನಾಯಿಯನ್ನು ತಂದು ನಮ್ಮ ಎದುರು ನಿಲ್ಲಿಸಿ, ಕೈ ಬೀಸುವಂತೆ ಮಾಡಿದರು. ನಾನು ಇದನ್ನು ನಿರ್ಲಕ್ಷಿಸಿ, ದಯವಿಟ್ಟು ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಿ ಎಂದು ಆಪರೇಟರ್‌ಗೆ ಹೇಳಿದೆ. ನನ್ನ ಸ್ನೇಹಿತನೊಂದಿಗೆ ನೆಮ್ಮದಿಯಾಗಿ ನಾಲ್ಕು ಮಾತುಗಳನ್ನು ಆಡಲು ನನಗೆ ಪ್ರೈವೆಸಿ ಬೇಕು. ಪ್ರತಿಯೊಂದು ಮಾತುಕತೆಯನ್ನೂ ವಿಡಿಯೋ ಮಾಡಿ ‘ಕೇನ್ ಮಾಮ ಮತ್ತು ವಿರಾಟ್ ಭೇಟಿ’ ಎಂದು ವೈರಲ್ ಮಾಡುವ ಅವಶ್ಯಕತೆ ಏನಿದೆ?” ಎಂದು ಕೊಹ್ಲಿ ಪ್ರಶ್ನಿಸಿದ್ದಾರೆ.
ಖಾಸಗಿತನ ಹಾಗೂ ಸ್ವಾತಂತ್ರ್ಯದ ಕೊರಗಿನಲ್ಲಿ ಕೊಹ್ಲಿ
ಸುಮಾರು ಎರಡು ದಶಕಗಳಿಂದ ಮಾಧ್ಯಮಗಳು ಹಾಗೂ ಅಭಿಮಾನಿಗಳ ಕಣ್ಗಾವಲಿನಲ್ಲಿರುವ ವಿರಾಟ್ ಕೊಹ್ಲಿ, ಡ್ರೆಸ್ಸಿಂಗ್ ರೂಮ್‌ನಿಂದ ಹಿಡಿದು ಮೈದಾನದವರೆಗೆ ಎಲ್ಲೆಡೆಯೂ ಕ್ಯಾಮೆರಾಗಳ ಅತಿಯಾದ ಹಸ್ತಕ್ಷೇಪವು ಮಿತಿಯನ್ನು ಮೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. “ನಾನು ಮೈದಾನದಲ್ಲಿ ಯಾರೊಂದಿಗಾದರೂ ಮಾತನಾಡಿದರೆ ಅದು ಕೂಡ ದೊಡ್ಡ ಸುದ್ದಿಯಾಗುತ್ತದೆ. ಇದೆಲ್ಲವೂ ಅತಿಯಾಯಿತು ಎನಿಸುತ್ತಿದೆ” ಎಂದು ಅವರು ಹೇಳಿದ್ದಾರೆ. ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ವರ್ಷದ ಬಹುಪಾಲು ಸಮಯವನ್ನು ಲಂಡನ್‌ನಲ್ಲಿ ಕಳೆಯುತ್ತಿರುವ ಕೊಹ್ಲಿಗೆ, ಇದೀಗ ಕ್ರೀಡಾಂಗಣದ ಒಳಗೂ ತಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವ ಫ್ರಾಂಚೈಸಿಗಳ ಕಂಟೆಂಟ್ ಸಂಸ್ಕೃತಿಯು ಭಾರಿ ಕಿರಿಕಿರಿ ಉಂಟುಮಾಡಿರುವುದು ಸುಳ್ಳಲ್ಲ. ಇದೆಲ್ಲದರ ನಡುವೆಯೂ, ಇತ್ತೀಚೆಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತಮ್ಮ ಒಂಬತ್ತನೇ ಐಪಿಎಲ್ ಶತಕ ಸಿಡಿಸುವ ಮೂಲಕ ಕೊಹ್ಲಿ ತಮ್ಮ ಬ್ಯಾಟ್ ಮೂಲಕವೇ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ : ಅಹಮದಾಬಾದ್‌ನಲ್ಲಿ ಐಸಿಸಿ ಸಭೆ ; ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಭಾಗಿ ಅನುಮಾನ!


















