ಬೆಂಗಳೂರು : ಹೆಚ್ಚಿನ ಸಂಬಳ, ಪ್ರಮೋಷನ್ ಸೇರಿ ಹಲವು ಕಾರಣಗಳಿಗಾಗಿ ಖಾಸಗಿ ಕಂಪನಿ ಉದ್ಯೋಗಿಗಳು ಕಂಪನಿಗಳನ್ನು ಬದಲಿಸುತ್ತಲೇ ಇರುತ್ತಾರೆ. ಹೀಗೆ ಪ್ರತಿ ಬಾರಿ ಹಳೆಯ ಕಂಪನಿ ಬಿಟ್ಟು ಹೊಸ ಕಂಪನಿ ಸೇರಿದಾಗ ಪಿಎಫ್ ಖಾತೆಯಲ್ಲಿರುವ ಹಣವನ್ನು ಹೊಸ ಖಾತೆಗೆ ಜಮೆ ಮಾಡುವುದು ದೊಡ್ಡ ತಲೆನೋವು ಆಗಿರುತ್ತದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾದರೂ ಹೆಚ್ಚಿನವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಕೆಲವೇ ದಿನಗಳಲ್ಲಿ ಈ ತಲೆನೋವು ಇರುವುದಿಲ್ಲ.
ಹೌದು, ಯಾವುದೇ ಉದ್ಯೋಗಿಯು ಒಂದು ಕಂಪನಿ ಬಿಟ್ಟು ಮತ್ತೊಂದು ಕಂಪನಿ ಸೇರಿದಾಗ, ಹಳೆಯ ಪಿಎಫ್ ಖಾತೆಯಲ್ಲಿರುವ ಹಣವು ಹೊಸ ಖಾತೆಗೆ ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್) ಜಮೆ ಆಗುವ ಹೊಸ ವ್ಯವಸ್ಥೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಶೀಘ್ರದಲ್ಲೇ ಜಾರಿಗೆ ತರಲಿದೆ. ಹೊಸ ಸೌಲಭ್ಯದ ಕುರಿತು ಈಗಾಗಲೇ ಕೇಂದ್ರ ಸರ್ಕಾರ ಮಾಹಿತಿಯನ್ನೂ ನೀಡಿದೆ. ಇದರಿಂದ ಕಂಪನಿ ಬದಲಾಯಿಸುವವರಿಗೆ ಭಾರಿ ಅನುಕೂಲವಾಗಲಿದೆ.
ಹಿಂದೆ ಕಂಪನಿ ಬದಲಿಸಿದಾಗ ಫಾರ್ಮ್ 13 ತುಂಬಿ ಮ್ಯಾನುಯಲ್ ಆಗಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ UAN (Universal Account Number) ಒಂದೇ ಆಗಿರುವುದರಿಂದ ಹಳೆಯ ಖಾತೆಯ ಹಣವನ್ನು ಆಟೋಮ್ಯಾಟಿಕ್ ಆಗಿ ವರ್ಗಾವಣೆಯಾಗುತ್ತದೆ. ಇದಕ್ಕಾಗಿ ಉದ್ಯೋಗಿಗಳು ಕೆಲ ಪ್ರಕ್ರಿಯೆ ಅನುಸರಿಸಬೇಕು. ನಿಮ್ಮ ಹೊಸ ಕಂಪನಿಯು ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಂಡಾಗ ನಿಮ್ಮ ಹಳೆಯ UAN ಅನ್ನೇ ನೀಡಬೇಕು.
ಹೊಸ ಕಂಪನಿಯು ನಿಮ್ಮ ಮೊದಲ ತಿಂಗಳ PF ಹಣವನ್ನು ಜಮಾ ಮಾಡಿದ ತಕ್ಷಣ, ಹಳೆಯ ಖಾತೆಯಿಂದ ಹೊಸ ಖಾತೆಗೆ ಹಣ ವರ್ಗಾಯಿಸಲು ಸಿಸ್ಟಮ್ ನಲ್ಲಿ ಪ್ರಕ್ರಿಯೆ ಆರಂಭವಾಗುತ್ತದೆ. ಹಳೆಯ ಕಂಪನಿಯಲ್ಲಿ ನೀವು ಕೆಲಸ ಬಿಟ್ಟ ದಿನಾಂಕ (Date of Exit) ಅಪ್ ಡೇಟ್ ಆಗಿರುವುದು ಅತ್ಯಗತ್ಯವಾಗಿರುತ್ತದೆ. ಇಷ್ಟು ಪ್ರಕ್ರಿಯೆ ಅನುಸರಿಸಿದರೆ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣವು ಹೊಸ ಖಾತೆಗೆ ಜಮೆಯಾಗುತ್ತದೆ.
ಇದನ್ನೂ ಓದಿ : ವಿದ್ಯಾರ್ಥಿಗಳೇ ಗಮನಿಸಿ : ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ.. ಕೂಡಲೇ ಅರ್ಜಿ ಸಲ್ಲಿಸಿ



















