ರಾಯ್‌ಪುರ : ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2026 ರ ಹೈ-ವೋಲ್ಟೇಜ್ ಪಂದ್ಯವು ಕ್ರೀಡಾಭಿಮಾನಿಗಳಿಗೆ ಉಸಿರು ಬಿಗಿಹಿಡಿಯುವ ಕ್ಷಣಗಳನ್ನು ಉಡುಗೊರೆಯಾಗಿ ನೀಡಿದೆ. ರೋಚಕ ಹೋರಾಟದಲ್ಲಿ ಮುಂಬೈ ವಿರುದ್ಧ ಕಡೇ ಎಸೆತದಲ್ಲಿ ವಿರೋಚಿತ ಗೆಲುವು ಸಾಧಿಸಿದ ಆರ್‌ಸಿಬಿ ಪಾಳೆಯದಲ್ಲಿ ಇದೀಗ ಸಂಭ್ರಮ ಮನೆಮಾಡಿದೆ.
ಈ ಅದ್ಭುತ ಗೆಲುವಿನ ರೂವಾರಿ, ತೀವ್ರ ಸ್ನಾಯುಸೆಳೆತದ ನಡುವೆಯೂ ಅಮೋಘ ಆಟ ಪ್ರದರ್ಶಿಸಿದ ಆಲ್ ರೌಂಡರ್ ಕೃಣಾಲ್ ಪಾಂಡ್ಯ ಅವರನ್ನು ಆರ್ ಸಿ ಬಿ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಡಿಹೊಗಳಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲಿ ಕೃಣಾಲ್ ಆಡಿದ ಈ 73 ರನ್‌ಗಳ ಆಟವನ್ನು ತಾನು ಐಪಿಎಲ್‌ನಲ್ಲಿ ನೋಡಿದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ಕೊಹ್ಲಿ ಬಣ್ಣಿಸಿದ್ದಾರೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ಕೃಣಾಲ್ ಗುಣಗಾನ ಮಾಡಿದ ವಿರಾಟ್
ಮುಂಬೈ ನೀಡಿದ್ದ 167 ರನ್‌ಗಳ ಗುರಿ ಬೆನ್ನತ್ತಿದ್ದ ಆರ್ ಸಿ ಬಿ ಕೇವಲ 39 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಪವರ್‌ಪ್ಲೇನಲ್ಲಿಯೇ ಸ್ವತಃ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದರು. ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ಕೂಡ ಬಹುಬೇಗನೆ ಪೆವಿಲಿಯನ್ ಸೇರಿದ್ದಾಗ ತಂಡವನ್ನು ಆಧರಿಸಿದ್ದು ಕೃಣಾಲ್ ಪಾಂಡ್ಯ.
ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಕೃಣಾಲ್ ಪಾಂಡ್ಯ ಅವರ ಹೋರಾಟದ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಪಿಚ್ ಬ್ಯಾಟರ್‌ಗಳಿಗೆ ಸವಾಲಾಗಿ ಪರಿಣಮಿಸಿ ಚೆಂಡು ಅಸಹಜವಾಗಿ ಬೌನ್ಸ್ ಆಗುತ್ತಿದ್ದರೂ, ಯಾವುದೇ ನೆಪ ಹೇಳದೆ, ಒತ್ತಡದಲ್ಲಿ ಕ್ರೀಸ್ ಕಚ್ಚಿ ನಿಂತು ಪರಿಹಾರ ಕಂಡುಕೊಂಡ ರೀತಿಯನ್ನು ಕೊಹ್ಲಿ ವಿಶೇಷವಾಗಿ ಉಲ್ಲೇಖಿಸಿದರು. ಈ ಸಂಭ್ರಮಾಚರಣೆ ಹಾಗೂ ವಿರಾಟ್ ಭಾಷಣದ ವಿಡಿಯೋವನ್ನು ಆರ್ ಸಿ ಬಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಸ್ನಾಯುಸೆಳೆತದ ನಡುವೆಯೂ ಛಲ ಬಿಡದ ಹೋರಾಟ
ಕೃಣಾಲ್ ಪಾಂಡ್ಯ ಅವರ ಇನ್ನಿಂಗ್ಸ್ ಜವಾಬ್ದಾರಿಯುತ ಆಟವಾಗಿತ್ತು. ಆರಂಭದಲ್ಲಿ ಜೇಕಬ್ ಬೆಥೆಲ್ ಅವರೊಂದಿಗೆ ಸೇರಿ ನಿಧಾನವಾಗಿ ರನ್ ಕಲೆಹಾಕಿದ ಅವರು, ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಒಟ್ಟು 46 ಎಸೆತಗಳನ್ನು ಎದುರಿಸಿದ ಕೃಣಾಲ್, 4 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 73 ರನ್ ಸಿಡಿಸಿದರು. ಅವರ ಸ್ಟ್ರೈಕ್ ರೇಟ್ 158.70 ಆಗಿತ್ತು. ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ತೀವ್ರ ಸ್ನಾಯುಸೆಳೆತಕ್ಕೆ ಒಳಗಾಗಿ ವಿಕೆಟ್‌ಗಳ ನಡುವೆ ಓಡಲು ಪರದಾಡುತ್ತಿದ್ದರೂ ಕ್ರೀಸ್ ಬಿಟ್ಟು ಕದಲದ ಕೃಣಾಲ್, 18ನೇ ಓವರ್‌ನಲ್ಲಿ ಎ.ಎಂ. ಗಜನ್‌ಫರ್ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದರು. ನೋವಿನಿಂದಾಗಿ ಆಟ ನಿಲ್ಲಿಸಬಹುದಾಗಿದ್ದರೂ, ತಂಡಕ್ಕಾಗಿ ಮುಂದುವರಿದು ಬಾರಿಸಿದ ಆ ಎರಡು ಸಿಕ್ಸರ್‌ಗಳೇ ಪಂದ್ಯದ ಗೆಲುವಿಗೆ ಪ್ರಮುಖ ಕಾರಣವಾಯಿತು ಎಂದು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊನೆಯ ಓವರ್‌ನ ರೋಚಕತೆ ಹಾಗೂ ಗೆಲುವಿನ ಸಂಭ್ರಮ
ಕೃಣಾಲ್ ಪಾಂಡ್ಯ ಔಟಾದ ಬಳಿಕ ಪಂದ್ಯ ಮತ್ತೊಮ್ಮೆ ರೋಚಕ ಘಟ್ಟ ತಲುಪಿತ್ತು. ಜಸ್ಪ್ರೀತ್ ಬುಮ್ರಾ 19ನೇ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಮುಂಬೈ ತಂಡವನ್ನು ಪಂದ್ಯಕ್ಕೆ ಮರಳಿಸುವ ಪ್ರಯತ್ನ ಮಾಡಿದರು. ಆದರೆ, ಅಂತಿಮ ಓವರ್‌ನಲ್ಲಿ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಸಿಡಿಸಿದ ಮಹತ್ವದ ಸಿಕ್ಸರ್ ಆರ್ ಸಿ ಬಿ ಪಾಳೆಯದಲ್ಲಿ ಮತ್ತೆ ಭರವಸೆ ಮೂಡಿಸಿತು. ಪಂದ್ಯದ ಕೊನೆಯ ಎಸೆತದಲ್ಲಿ ಗೆಲುವಿಗೆ ರನ್ ಬೇಕಾಗಿದ್ದಾಗ ರಸಿಖ್ ಸಲಾಮ್ ದಾರ್ ಅವರು ಯಶಸ್ವಿಯಾಗಿ ಎರಡು ರನ್ ಕಲೆಹಾಕುವ ಮೂಲಕ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಪವರ್‌ಪ್ಲೇನಲ್ಲಿ ಬಹುಬೇಗನೆ ವಿಕೆಟ್ ಕಳೆದುಕೊಂಡರೆ ಈ ಆವೃತ್ತಿಯಲ್ಲಿ ಪಂದ್ಯವನ್ನೇ ಗೆಲ್ಲದಿದ್ದ ಆರ್ ಸಿ ಬಿ ತಂಡಕ್ಕೆ, ಕೃಣಾಲ್ ಪಾಂಡ್ಯ ಅವರ ಈ ದಿಟ್ಟ ಹೋರಾಟದ ಇನ್ನಿಂಗ್ಸ್ ಮರೆಯಲಾಗದ ಗೆಲುವಿನ ಸಿಹಿಯನ್ನು ನೀಡಿದೆ.
ಇದನ್ನೂ ಓದಿ : ಕೃಣಾಲ್ ಪಾಂಡ್ಯ ಆಟದ ಬೆನ್ನಲ್ಲೇ ಬದರಿನಾಥ್ ಕಿಡಿ ; RCB ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಯಿತೇ ಆ ಒಂದು ಕಮೆಂಟ್?



















