ಮಂಡ್ಯ : ಕೆ.ಆರ್.ಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ನ ‘ಸಂಘಟನಾ ಸೃಜನ ಅಭಿಯಾನ’ ಸಭೆ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಸಭೆಯಲ್ಲಿ ಎಐಸಿಸಿ ವೀಕ್ಷಕ ಸೈಮನ್ ಅಲೆಕ್ಸ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹಾಗೂ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಭಾಗವಹಿಸಿದ್ದ ವೇಳೆ ಕೈ ಕಾರ್ಯಕರ್ತರು ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ವಿಶೇಷವಾಗಿ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಅವರನ್ನು ಕಾರ್ಯಕರ್ತರು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನಲ್ಲಿ ಕಾರ್ಯಕರ್ತರ ಸಮಸ್ಯೆಗಳನ್ನು ಕೇಳಿ ಸ್ಪಂದಿಸುವ ನಾಯಕರೇ ಇಲ್ಲ. ಜಿಲ್ಲಾಧ್ಯಕ್ಷರಿಂದ ಯಾವುದೇ ಪ್ರಯೋಜನವಾಗಿಲ್ಲ. ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಜಿಲ್ಲಾಧ್ಯಕ್ಷರನ್ನು ತಕ್ಷಣ ಬದಲಿಸಿ ಹೊಸ ಅಧ್ಯಕ್ಷರನ್ನು ನೇಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಕಾರ್ಯಕರ್ತರ ಆಕ್ರೋಶ ತಣ್ಣಗಾಗಿಸಲು ಮುಂದಾದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, “ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ನಾವು ಬಂದಿದ್ದೇವೆ. ಅದಕ್ಕಾಗಿ ನಿಮ್ಮ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಇದಕ್ಕೂ ಕಾರ್ಯಕರ್ತರು ಸಮಾಧಾನಗೊಳ್ಳಲಿಲ್ಲ.
ಸಭೆಯುದ್ದಕ್ಕೂ ವಾಗ್ವಾದ, ಗಲಾಟೆ ಮತ್ತು ಆರೋಪ-ಪ್ರತ್ಯಾರೋಪಗಳು ಮುಂದುವರಿದ ಪರಿಣಾಮ, ಕಾಂಗ್ರೆಸ್ ಸಭೆ ಗೊಂದಲದ ವಾತಾವರಣದಲ್ಲೇ ಅಂತ್ಯಗೊಂಡಿತು. ಜಿಲ್ಲೆಯ ಕಾಂಗ್ರೆಸ್ ಸಂಘಟನೆಯೊಳಗಿನ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗಿದ್ದು, ಮುಂಬರುವ ದಿನಗಳಲ್ಲಿ ಇದು ಪಕ್ಷಕ್ಕೆ ಹೊಸ ತಲೆನೋವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಸಚಿವ ಸಂಪುಟ ಕ್ಲೈಮ್ಯಾಕ್ಸ್.. 20 ಜನರಿಗೆ ಮಂತ್ರಿಗಿರಿ? ಪ್ರಮಾಣ ವಚನಕ್ಕೂ ಡೇಟ್ ಫಿಕ್ಸ್!


















