ಬೆಂಗಳೂರು : ಬಳ್ಳಾರಿ ಚಲೋ ಪಾದಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಮತ್ತೊಂದು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ಬಳ್ಳಾರಿ ಚಲೋ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಘರ್ಜಿಸಿದ್ದು, ವೇದಿಕೆಯಲ್ಲೇ ಹೋರಾಟ ಮುಗಿದಿಲ್ಲ, ಇದು ಹೋರಾಟದ ಆರಂಭವಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ.
ಬಳ್ಳಾರಿ ಚಲೋ ಪಾದಯಾತ್ರೆ ವಿಜಯೇಂದ್ರ ಅವರಿಗೆ ಪಕ್ಷದೊಳಗೂ ಹೆಚ್ಚಿನ ರಾಜಕೀಯ ಮೈಲೇಜ್ ತಂದುಕೊಟ್ಟಿದೆ ಎನ್ನಲಾಗಿದ್ದು, ಹೈಕಮಾಂಡ್ ಮಟ್ಟದಲ್ಲೂ ವಿಜಯೇಂದ್ರ ಉತ್ತಮ ಹೆಸರು ಗಳಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಇದೇ ಉತ್ಸಾಹದೊಂದಿಗೆ ಶೀಘ್ರದಲ್ಲೇ ಮತ್ತೊಂದು ಹೋರಾಟಕ್ಕೆ ರಾಜ್ಯಾಧ್ಯಕ್ಷರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮುಂದಿನ ಹೋರಾಟದ ಭಾಗವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಬಿ.ವೈ. ವಿಜಯೇಂದ್ರ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಜನರು, ರೈತರು ಹಾಗೂ ಬಡವರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಉದ್ದೇಶ ಹೊಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಹಾಗೂ ಭ್ರಷ್ಟಾಚಾರದ ವಿಚಾರಗಳನ್ನು ಜನರ ಮುಂದಿಡಲು ರಾಜ್ಯ ಪ್ರವಾಸ ನಡೆಸುವ ಸಿದ್ಧತೆಯೂ ನಡೆಯುತ್ತಿದೆ ಎನ್ನಲಾಗಿದೆ.
ವಿಜಯೇಂದ್ರ ಮಾತ್ರವಲ್ಲದೆ ಬಿಜೆಪಿ ಪ್ರಮುಖ ನಾಯಕರು ಕೂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವ ಸಾಧ್ಯತೆ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವ ಗುರಿಯೊಂದಿಗೆ ರಾಜ್ಯ ಬಿಜೆಪಿ ಹಲವು ರಾಜಕೀಯ ತಂತ್ರ ಹಾಗೂ ಹೋರಾಟಗಳ ರೂಪುರೇಷೆ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ : KPSC ಅಕ್ರಮ ಹಣದಲ್ಲಿ ಮೋಜು ಮಸ್ತಿ ; ಗೆಳತಿಗೆ 26 ಲಕ್ಷದ ಚಿನ್ನ, ಸಹೋದರನ ಹೆಸರಲ್ಲಿ ವಿಲ್ಲಾ ಖರೀದಿಸಿದ್ದ ಗ್ಯಾನೇಂದ್ರ!?


















