ಬೆಂಗಳೂರು : ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣದ ಸಿಐಡಿ ತನಿಖೆಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಗ್ಯಾನೇಂದ್ರ ಕುಮಾರ್‌ಗೆ ಸಂಬಂಧಿಸಿದಂತೆ ಮತ್ತಷ್ಟು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಅಕ್ರಮ ಹಣದಿಂದ ಗೆಳತಿಗೆ 26 ಲಕ್ಷ ಮೌಲ್ಯದ ಚಿನ್ನಾಭರಣ ಕೊಡಿಸಿರುವ ಆರೋಪದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದ್ದು, ಚಿನ್ನಾಭರಣ ಪಡೆದಿದ್ದ ಅಯೋಧ್ಯೆ ಮೂಲದ ಗೆಳತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಸಿಐಡಿ ತನಿಖೆ ಪ್ರಕಾರ, ಗ್ಯಾನೇಂದ್ರ ಕುಮಾರ್ ತನ್ನ ಗೆಳತಿಯನ್ನು ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ಕರೆದೊಯ್ದು ಚಿನ್ನಾಭರಣ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ ಎನ್ನಲಾಗಿದೆ. ಬೀದರ್‌ನ ಲಕ್ಷ್ಮಿ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಖಾತೆಯಿಂದ ಆಭರಣ ಖರೀದಿಗೆ ಹಣ ಪಾವತಿಯಾಗಿದ್ದು, ‘ಬಸವರಾಜ್’ ಹೆಸರಿನ ಖಾತೆಯಿಂದ ಚಿನ್ನದ ಖರೀದಿ ಬಿಲ್ ಪಾವತಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಆಭರಣ ಖರೀದಿಯ ಬಿಲ್‌ಗಳನ್ನು ಸಿಐಡಿ ಜಪ್ತಿ ಮಾಡಿಕೊಂಡಿದ್ದು, ಗ್ಯಾನೇಂದ್ರ ಕುಮಾರ್ ತನ್ನ ಗೆಳತಿಯೊಂದಿಗೆ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಖರೀದಿಸುತ್ತಿರುವ ಫೋಟೋ ಸಾಕ್ಷ್ಯಗಳನ್ನೂ ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ.
ಇದೇ ವೇಳೆ ಗ್ಯಾನೇಂದ್ರ ಕುಮಾರ್ ಅವರ ಸಹೋದರ ಕಮಲಾಪತಿ ಹೆಸರಿನಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿರುವ ವಿಚಾರವೂ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಲ್ಲಾ ಖರೀದಿಸಲಾಗಿದ್ದು, ಇದರ ಹಿಂದೆ ಅಕ್ರಮ ಹಣ ಬಳಕೆಯಾಗಿದೆಯೇ ಎಂಬ ಅನುಮಾನ ಸಿಐಡಿಗೆ ಮೂಡಿದೆ. ಈ ಹಿನ್ನೆಲೆಯಲ್ಲಿ ವಿಲ್ಲಾ ಖರೀದಿಗೆ ಸಂಬಂಧಿಸಿದ ಹಣದ ಮೂಲ ಸೇರಿದಂತೆ ಹಲವು ವಿಚಾರಗಳ ಕುರಿತು ತನಿಖೆ ಮುಂದುವರಿದಿದೆ.
ಗ್ಯಾನೇಂದ್ರ ಕುಮಾರ್ 2024ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ಕೆಪಿಎಸ್ಸಿಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ನಡೆದ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರಿದಿದ್ದು, ಅಕ್ರಮ ಹಣದ ಬಳಕೆ, ಚಿನ್ನಾಭರಣ ಖರೀದಿ ಹಾಗೂ ಆಸ್ತಿ ಸಂಪಾದನೆಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳ ಕುರಿತು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ : ಪವಿತ್ರಾ ಗೌಡ ಬೇಡಿಕೆಗೆ ಅಸ್ತು ಎಂದ ಕೋರ್ಟ್!


















