ಮುಂಬೈ : ಐಪಿಎಲ್ 2026ರ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿರುವ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಇದೀಗ ಮಹತ್ವದ ಬದಲಾವಣೆಗಳಾಗುವ ಮುನ್ಸೂಚನೆ ಲಭ್ಯವಾಗಿದೆ. ತಂಡದ ಕಳಪೆ ಪ್ರದರ್ಶನ, ಮೈದಾನದಲ್ಲಿ ಅಭಿಮಾನಿಗಳ ನಿರಂತರ ಆಕ್ರೋಶ ಹಾಗೂ ಡ್ರೆಸ್ಸಿಂಗ್ ರೂಮ್‌ನಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ನಾಯಕ ಹಾರ್ದಿಕ್ ಪಾಂಡ್ಯ, ಫ್ರಾಂಚೈಸಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮುಂಬರುವ ಟ್ರೇಡಿಂಗ್ ವಿಂಡೋ ಅಥವಾ ಮೆಗಾ ಹರಾಜಿನ ಮೂಲಕ ಅವರು ಬೇರೊಂದು ತಂಡವನ್ನು ಸೇರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಆಂತರಿಕ ಭಿನ್ನಾಭಿಪ್ರಾಯ
ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿತ್ತು. ನಾಯಕನಾಗಿ ತಂಡವನ್ನು ಮುನ್ನಡೆಸಿದ ಹಾರ್ದಿಕ್ ಪಾಂಡ್ಯ ಅವರಿಗೆ ಹಿರಿಯ ಆಟಗಾರರಿಂದ ಸೂಕ್ತ ಬೆಂಬಲ ಸಿಗಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆಟಗಾರರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಪಾಂಡ್ಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಏಕಾಂಗಿಯಾಗಿದ್ದರು. ಮಾನಸಿಕವಾಗಿ ತೀವ್ರ ಬಳಲಿದ್ದ ಅವರು, ಟೂರ್ನಿಯ ಮಧ್ಯದಲ್ಲೇ ಮ್ಯಾನೇಜ್‌ಮೆಂಟ್‌ಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ, ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವನ್ನು ಅನ್‌ಫಾಲೋ ಮಾಡಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಟ್ರೇಡಿಂಗ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಸಿಎಸ್‌ಕೆ
ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬರಲು ಸಜ್ಜಾಗಿರುವ ಸ್ಟಾರ್ ಆಲ್‌ರೌಂಡರ್ ಮೇಲೆ ಇದೀಗ ಇತರ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಟ್ರೇಡಿಂಗ್ ಪ್ರಕ್ರಿಯೆಯ ಮೂಲಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮತ್ತ ಸೆಳೆಯಲು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ), ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಅದರಲ್ಲೂ ಎಂ.ಎಸ್ ಧೋನಿ ಅವರ ಮಾರ್ಗದರ್ಶನವಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪಾಂಡ್ಯ ಸೇರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ವರದಿಯಾಗಿದೆ. ನಾಯಕತ್ವದ ಭರವಸೆ ಸಿಕ್ಕರೆ ಅವರು ಕೆಕೆಆರ್ ಅಥವಾ ರಾಜಸ್ಥಾನ್ ತಂಡಗಳಿಗೂ ಒಲವು ತೋರುವ ಅವಕಾಶವಿದೆ. ಒಟ್ಟಾರೆಯಾಗಿ ಮುಂದಿನ ಐಪಿಎಲ್ ಸೀಸನ್‌ಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : IPL 2027ರ ಮೆಗಾ ಹರಾಜಿಗೂ ಮುನ್ನ ಮತೀಶ ಪತಿರಣನನ್ನು ಕೈಬಿಡಲು ಕೆಕೆಆರ್ ನಿರ್ಧಾರ!


















