ಬೆಂಗಳೂರು : ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಬೆಂಚ್‌ಗೆ ಸೀಮಿತಗೊಳಿಸಿದ ಟೀಮ್ ಇಂಡಿಯಾ ನಿರ್ಧಾರವನ್ನು ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ತೀವ್ರವಾಗಿ ಟೀಕಿಸಿದ್ದಾರೆ. ಐರ್ಲೆಂಡ್‌ನ ನಿಧಾನಗತಿಯ ಪಿಚ್ ಹಾಗೂ ಸಣ್ಣ ಮೈದಾನದಲ್ಲಿ ವೈಭವ್ ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿದ್ದರು ಎಂದು ಶಾಸ್ತ್ರಿ ತಮ್ಮದೇ ಶೈಲಿಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಐರ್ಲೆಂಡ್‌ನಲ್ಲಿ ಆಡಿಸಬೇಕಿತ್ತು ಎಂದ ಶಾಸ್ತ್ರಿ
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಖಚಿತವಾಗಿ ಅವಕಾಶ ನೀಡಬೇಕಿತ್ತು ಎಂದಿದ್ದಾರೆ. ಐರ್ಲೆಂಡ್‌ನಂತಹ ಸಣ್ಣ ಮೈದಾನದಲ್ಲಿ ಅವರು ಚೆಂಡನ್ನು ಸುಲಭವಾಗಿ ಬೌಂಡರಿಗಟ್ಟುತ್ತಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಆದಷ್ಟು ಬೇಗ ಅವರನ್ನು ಕಣಕ್ಕಿಳಿಸಬೇಕು ಎಂದು ಶಾಸ್ತ್ರಿ ಆಗ್ರಹಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಎಲ್ಲ ವೇಗದ ಬೌಲರ್‌ಗಳನ್ನು ದಂಡಿಸಿರುವ ಈ ಯುವ ಪ್ರತಿಭೆಯನ್ನು ಬೆಂಚ್ ಮೇಲೆ ಕೂರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.
ಯುವ ಪ್ರತಿಭೆಯನ್ನು ಕಡೆಗಣಿಸಿದ ಟೀಮ್ ಇಂಡಿಯಾ
ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಐಪಿಎಲ್ ಟೂರ್ನಿಯಲ್ಲಿ 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ವೈಭವ್ ಸೂರ್ಯವಂಶಿ, ಅಂಡರ್-19 ವಿಶ್ವಕಪ್ ಫೈನಲ್‌ನಲ್ಲೂ 175 ರನ್ ಸಿಡಿಸಿ ಮಿಂಚಿದ್ದರು. ಇಂತಹ ಅದ್ಭುತ ಫಾರ್ಮ್‌ನಲ್ಲಿದ್ದರೂ, ಐರ್ಲೆಂಡ್ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರನ್ನೇ ನೆಚ್ಚಿಕೊಂಡಿದ್ದ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಸರಣಿಯನ್ನು 0-2 ಅಂತರದಲ್ಲಿ ಕೈಚೆಲ್ಲಿತು. 15 ವರ್ಷದ ಈ ಯುವ ಆಟಗಾರ ಯಾವುದೇ ಭಯವಿಲ್ಲದೆ ಆಡುವ ಎಕ್ಸ್-ಫ್ಯಾಕ್ಟರ್ ಆಗಿದ್ದು, ಆರಂಭಿಕ ಓವರ್‌ಗಳಲ್ಲೇ ಪಂದ್ಯದ ಗತಿಯನ್ನು ಬದಲಾಯಿಸಬಲ್ಲರು ಎಂದು ರವಿ ಶಾಸ್ತ್ರಿ ವಿಶ್ಲೇಷಿಸಿದ್ದಾರೆ.
ಇಂಗ್ಲೆಂಡ್ ಸರಣಿಯಲ್ಲಾದರೂ ಸಿಗಲಿದೆಯಾ ಅವಕಾಶ?
ಐರ್ಲೆಂಡ್ ವಿರುದ್ಧದ ನಿರಾಸೆಯ ಬಳಿಕ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ, ಚೆಸ್ಟರ್-ಲೀ-ಸ್ಟ್ರೀಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲೂ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿದೆ. ಟಿ20 ವಿಶ್ವಕಪ್ ಗೆದ್ದುಕೊಟ್ಟ ಅಗ್ರಕ್ರಮಾಂಕದ ಆಟಗಾರರ ಮೇಲೆಯೇ ನಂಬಿಕೆ ಇಟ್ಟಿರುವ ಮ್ಯಾನೇಜ್ಮೆಂಟ್, ಯುವ ಪ್ರತಿಭೆಗೆ ಅವಕಾಶ ನಿರಾಕರಿಸುತ್ತಲೇ ಇದೆ. ಇಂಗ್ಲೆಂಡ್ ವಿರುದ್ಧ ಇನ್ನೂ ನಾಲ್ಕು ಟಿ20 ಪಂದ್ಯಗಳು ಬಾಕಿ ಉಳಿದಿದ್ದು, ಮುಂದಿನ ಪಂದ್ಯಗಳಲ್ಲಾದರೂ ಈ ಯುವ ಆಟಗಾರನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಭಾಗ್ಯ ಒಲಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾದ ಹಾರ್ದಿಕ್ ಪಾಂಡ್ಯ : ಟ್ರೇಡಿಂಗ್ ಮೂಲಕ ಹೊಸ ಫ್ರಾಂಚೈಸಿಯತ್ತ ಒಲವು!


















