ಮೈಸೂರು : ರಾಜ್ಯದ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿರುವ ಅವರು, ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ಇದೆ. ರಿಯಲ್ ಎಸ್ಟೇಟ್ ನಡೆಸುವವರು ನಿವೇಶನಗಳನ್ನಾದರೂ ಮಾರಾಟ ಮಾಡಿ ಚುನಾವಣೆ ಎದುರಿಸುತ್ತಾರೆ. ಆದರೆ, ನನಗೆ ಒಂದು ಮನೆ ಒಂದು ನಿವೇಶನ ಮಾತ್ರ ಇವೆ. 50 ಕೋಟಿ ಖರ್ಚು ಮಾಡಿ ಚುನಾವಣೆ ಎದುರಿಸುವಷ್ಟು ಶಕ್ತಿ ನನ್ನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಮುಂದೆ ನಾನು ಯಾವ ಚುನಾವಣೆಗೂ ಸ್ಪರ್ಧಿಸುವುದಿಲ್ಲ. ನಾನು ಹಲವು ಬಾರಿ ಚುನಾವಣೆ ಎದುರಿಸಿದಾಗ ಜನರೇ ಹಣ ನೀಡಿ ಆಶೀರ್ವಾದ ಮಾಡಿದ್ದರು. ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ಇದೆ. ಹೀಗಾಗಿ ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳುತ್ತಿದ್ದೇನೆ. ಆದರೆ ರಾಜಕೀಯದಲ್ಲಿ ಇರುತ್ತೇನೆ’ ಎಂದು ಹೇಳಿದ್ದಾರೆ.
ಇನ್ನು ನಿವೃತ್ತಿ ಘೋಷಣೆಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದು, ಪೋಕ್ಸೋ ಪ್ರಕರಣ ಮತ್ತು ಈ ಸಮಯದಲ್ಲಿ ನಡೆಯುತ್ತಿರುವ ಸನ್ಮಾನಗಳು ರಾಜ್ಯದ ಘನತೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ ಎಂದಿದ್ದಾರೆ. ಸರ್ಕಾರದ ನಡೆಯನ್ನು ಟೀಕಿಸಿದ ಅವರು, ಸ್ವತಃ ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಲ್ಲಾ ತಿಳಿಯುತ್ತಿಲ್ಲವೇ? ಎಂದು ಕಿಡಿ ಕಾರಿದ್ದಾರೆ.
ಪೋಕ್ಸೋ ನಂತಹ ಗಂಭೀರ ಆರೋಪ ಪ್ರಕರಣ ಎದುರಿಸುತ್ತಿರುವ ಸಂದರ್ಭದಲ್ಲಿ ಅಭಿಮಾನೋತ್ಸವ ಮಾಡುವುದು ಎಷ್ಟು ಸರಿ?” ಎಂದು ಮಾಜಿ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : ವಾಯುಪಡೆಯಿಂದ ರಾಜಕೀಯದ ಒಳಹಜಾರದವರೆಗೆ – ಸುವೇಂದು ಅಧಿಕಾರಿಯ ನೆರಳಿನಂತಿದ್ದ ಚಂದ್ರನಾಥ್ ರಥ್!



















