ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಕೆ, ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಭಾರತದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಕುಸಿತದ ಪರಿಣಾಮವಾಗಿ ದೇಶದಲ್ಲಿ ಚಿನ್ನದ ಬೆಲೆ ಇಳಿಕೆ (Gold, Silver Rate Today) ಮುಂದುವರಿದಿದೆ. ಗುರುವಾರ (ಜೂನ್ 25) ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಶುಭ ಸಮಾರಂಭ ಸೇರಿ ಹಲವು ಕಾರಣಗಳಿಗೆ ಚಿನ್ನ ಖರೀದಿಸುವವರಿಗೆ ಶುಭ ದಿನ ಎನಿಸಿದೆ. ಅಷ್ಟೇ ಅಲ್ಲ, ಕಳೆದ 8 ತಿಂಗಳಲ್ಲಿಯೇ ಚಿನ್ನದ ಬೆಲೆಯು ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಗುರುವಾರ ಒಂದೇ ದಿನ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,780 ರೂಪಾಯಿ ಇಳಿಕೆಯಾಗಿದೆ. ಇದೇ ರೀತಿ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,550 ರೂಪಾಯಿ ಇಳಿಕೆಯಾಗಿದೆ. ಗುರುವಾರದ ಇಳಿಕೆಯೊಂದಿಗೆ ಬೆಂಗಳೂರಿನಲ್ಲಿ 24 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 14,013 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ, 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ದರವು 12,845 ರೂಪಾಯಿಗೆ ಇಳಿಕೆಯಾಗಿದೆ.
ಇದರೊಂದಿಗೆ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾದಂತಾಗಿದೆ. ಸೋಮವಾರ ಹಾಗೂ ಮಂಗಳವಾರ ಕೂಡ ಬಂಗಾರದ ಧಾರಣೆಯಲ್ಲಿ ಇಳಿಕೆಯಾಗಿದ್ದು ಗ್ರಾಹಕರಿಗೆ ಸಂತಸ ತಂದಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರದಲ್ಲಿ ಇಳಿಕೆ ಮಾಡದೆ, ಏರಿಕೆಯ ಚಿಂತನೆ ನಡೆದಿದೆ ಎಂಬ ವರದಿಗಳು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಬೆಳ್ಳಿ ಬೆಲೆಯಲ್ಲೂ 10 ಸಾವಿರ ರೂ. ಕುಸಿತ
ಚಿನ್ನದಂತೆ ಬೆಳ್ಳಿಯ ಧಾರಣೆಯಲ್ಲೂ ಸತತವಾಗಿ ಕುಸಿತ ಉಂಟಾಗುತ್ತಿದೆ. ಗುರುವಾರ ಒಂದೇ ದಿನ 1 ಕೆ.ಜಿ. ಬೆಳ್ಳಿಯ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 1 ಕೆ.ಜಿ. ಬೆಳ್ಳಿಯ ಬೆಲೆಯು 2.35 ಲಕ್ಷ ರೂಪಾಯಿಗೆ ಕುಸಿದಿದೆ. ಕಳೆದ 10 ದಿನಗಳಲ್ಲಿ ಬೆಳ್ಳಿಯ ದರದಲ್ಲಿ 30 ಸಾವಿರ ರೂಪಾಯಿ ಇಳಿಕೆಯಾಗಿದೆ.



















