ಬೆಂಗಳೂರು : ಮಂಗಳವಾರ (ಮೇ 5) ಭಾರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಬುಧವಾರ (ಮೇ 6) ದಿಢೀರನೆ ಭಾರಿ ಏರಿಕೆಯಾಗಿದೆ. ಹಾಗಾಗಿ, ಇಂದು ಚಿನ್ನ ಖರೀದಿಸುವವರಿಗೆ ಇದು ಬ್ಯಾಡ್ ನ್ಯೂಸ್ ಎನಿಸಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 2 ಸಾವಿರ ರೂಪಾಯಿ (Gold Rate in Bangalore Today) ಏರಿಕೆಯಾಗಿದೆ. ಹಾಗಾದರೆ, ರಾಜ್ಯ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ ಎಷ್ಟಿದೆ? 22 ಕ್ಯಾರಟ್ ರೇಟ್ ಎಷ್ಟು? 24 ಕ್ಯಾರಟ್ ಚಿನ್ನದ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬುಧವಾರ 195 ರೂಪಾಯಿ ಏರಿಕೆಯಾಗಿದೆ. ಇದೇ ರೀತಿ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 213 ರೂಪಾಯಿ ಏರಿಕೆಯಾಗಿದೆ. ಬೆಲೆಯೇರಿಕೆಯ ಬಳಿಕ ಬೆಂಗಳೂರಿನಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆಯು 1,38,700 ರೂಪಾಯಿ ಆಗಿದೆ. ಹಾಗೆಯೇ, 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆಯು 1,51,310 ರೂಪಾಯಿ ಆಗಿದೆ.
ಬೆಳ್ಳಿ ಬೆಲೆಯಲ್ಲಿ 10 ಸಾವಿರ ರೂ. ಏರಿಕೆ
ಬುಧವಾರ ಬೆಳ್ಳಿಯ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿ ದರದಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿ ಜಾಸ್ತಿಯಾಗಿದೆ. ಇದರೊಂದಿಗೆ ಒಂದು ಕೆ.ಜಿ ಬೆಳ್ಳಿ ಬೆಲೆಯೀಗ 2.65 ಲಕ್ಷ ರೂಪಾಯಿಗೆ ತಲುಪಿದೆ. ಮಂಗಳವಾರ ಬೆಳ್ಳಿಯ ಬೆಲೆಯಲ್ಲಿ 10 ಸಾವಿರ ರೂಪಾಯಿ ಇಳಿಕೆಯಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತು ರಾಜಕೀಯ ಬಿಕ್ಕಟ್ಟುಗಳಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಚಿನ್ನ, ಬೆಳ್ಳಿ ಬೆಲೆ ಜಾಸ್ತಿಯಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿನ ಏರಿಳಿತಗಳು ಕೂಡ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಲು ಕಾರಣವಾಗುತ್ತವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಎಣ್ಣೆ ಮತ್ತಲ್ಲಿ ಸಾಯ್ತೀನಿ ಎಂದು ರಾಜಕಾಲುವೆ ಗ್ರಿಲ್ ಏರಿ ಯುವಕನ ಹುಚ್ಚಾಟ!


















