ಬೆಂಗಳೂರು: ಇನ್ನೊಂದು ವರ್ಷ ಚಿನ್ನ ಖರೀದಿಸಬೇಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೇರಿಕೆಯಿಂದಾಗಿ ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯೀಗ ಮತ್ತೆ ಇಳಿಕೆಯ ಹಾದಿ ಹಿಡಿದಿದೆ. ಶನಿವಾರ ಒಂದೇ ದಿನ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ಗ್ರಾಂಗೆ 98 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂಗೆ 90 ರೂಪಾಯಿ ಇಳಿಕೆಯಾಗಿದೆ. ಇದು ಚಿನ್ನ ಖರೀದಿಸುವವರಿಗೆ ಸ್ವಲ್ಪ ನಿರಾಳತೆ ಮೂಡಿಸಿದೆ.
ಇದರೊಂದಿಗೆ ಬೆಂಗಳೂರಿನಲ್ಲಿ ಶನಿವಾರ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯು 14,385 ರೂಪಾಯಿ ಆಗಿದೆ. ಹಾಗೆಯೇ, 24 ಕ್ಯಾರಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 15,693 ರೂಪಾಯಿ ಆಗಿದೆ. ಕಳೆದ ಎರಡು ದಿನಗಳಿಂದ ಸತತವಾಗಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಸಮಾರಂಭಗಳಿಗಾಗಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ಎನಿಸಿದೆ. ನರೇಂದ್ರ ಮೋದಿ ಕರೆಯ ಬಳಿಕ ಸತತ 4 ದಿನ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು.
ಬೆಳ್ಳಿ ಧಾರಣೆಯಲ್ಲೂ 10 ಸಾವಿರ ರೂ. ಇಳಿಕೆ
ಚಿನ್ನ ಮಾತ್ರವಲ್ಲದೆ, ಬೆಳ್ಳಿಯ ಬೆಲೆಯಲ್ಲೂ ಶನಿವಾರ ಭಾರಿ ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ 1 ಕೆ.ಜಿ ಬೆಳ್ಳಿ ಬೆಲೆಯು ಈಗ 2.8 ಲಕ್ಷ ರೂಪಾಯಿ ಆಗಿದೆ. ಕಳೆದ ಮೂರು ದಿನಗಳಿಂದ ಬೆಳ್ಳಿ ಬೆಲೆಯಲ್ಲಿ 30 ಸಾವಿರ ರೂಪಾಯಿ ಇಳಿಕೆಯಾದಂತಾಗಿದೆ. ಇದಕ್ಕೂ ಮೊದಲು ಎರಡು ದಿನಗಳಲ್ಲಿಯೇ ಬೆಳ್ಳಿ ಬೆಲೆಯಲ್ಲಿ 35 ಸಾವಿರ ರೂಪಾಯಿ ಏರಿಕೆಯಾಗಿತ್ತು.
ಅಮೆರಿಕ ಹಾಗೂ ಇರಾನ್ ಮಧ್ಯೆ ಸಂಘರ್ಷ ನಡೆಯುತ್ತಿರುವ ಕಾರಣ ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಉಂಟಾಗುತ್ತಿದೆ. ಅದರಲ್ಲೂ, ದೇಶದ ಆರ್ಥಿಕತೆ, ವಿದೇಶಿ ವಿನಿಮಯದ ದೃಷ್ಟಿಯಿಂದ ಮೋದಿ ಅವರು ಒಂದು ವರ್ಷದವರೆಗೆ ಯಾರೂ ಅನವಶ್ಯಕವಾಗಿ ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದ್ದಾರೆ. ಇದು ಕೂಡ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಳಿತ ಉಂಟಾಗಲು ಕಾರಣವಾಗಿದೆ. ಆದಾಗ್ಯೂ, ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6ರಿಂದ ಶೇ.15ಕ್ಕೆ ಏರಿಕೆ ಮಾಡಿದೆ.



















