ನವದೆಹಲಿ: ಬಡತನವೆಂಬುದು ಕೇವಲ ಆದಾಯ ಅಥವಾ ಕೂಲಿಯ ಕೊರತೆಯಲ್ಲ, ಬದಲಾಗಿ ವಸತಿ, ಶುದ್ಧ ಕುಡಿಯುವ ನೀರು, ನೈರ್ಮಲ್ಯ ಮತ್ತು ಆರೋಗ್ಯ ಸೇವೆಯಂತಹ ಮೂಲಭೂತ ಸೌಕರ್ಯಗಳ ಅಭಾವದಿಂದ ಉಂಟಾಗುವ ಪರಿಸ್ಥಿತಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಒಂದು ದಶಕದಲ್ಲಿ ನರೇಂದ್ರ ಮೋದಿ ಸರ್ಕಾರದ ಕಲ್ಯಾಣ ಯೋಜನೆಗಳು ಭಾರತದಲ್ಲಿ ಬಡತನ ನಿರ್ಮೂಲನೆಯಲ್ಲಿ ದೊಡ್ಡ ಬದಲಾವಣೆ ತಂದಿವೆ ಎಂದು ಅವರು ತಮ್ಮ ಲಿಂಕ್ಡ್ಇನ್ (LinkedIn) ಬರಹದಲ್ಲಿ ವಿವರಿಸಿದ್ದಾರೆ.
ಕಳೆದ ತಿಂಗಳು ಬಿಡುಗಡೆಯಾದ ವಿಶ್ವಬ್ಯಾಂಕ್ನ ವರದಿಯನ್ನು ಉಲ್ಲೇಖಿಸಿರುವ ಸೀತಾರಾಮನ್, 2011 ಮತ್ತು 2023ರ ನಡುವೆ ಸುಮಾರು 50 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಮತ್ತು ತೀವ್ರ ಬಡತನವು ದೇಶದಲ್ಲಿ ಬಹುತೇಕ ನಿರ್ಮೂಲನೆಯಾಗಿದೆ ಎಂದು ತಿಳಿಸಿದ್ದಾರೆ. ‘ಭಾರತವು ಬಡತನದ ದಿಕ್ಕನ್ನೇ ಬದಲಿಸಿದ ದಶಕ’ ಎಂಬ ಶೀರ್ಷಿಕೆಯಡಿ ಬರೆದಿರುವ ಈ ಲೇಖನದಲ್ಲಿ, ಸರ್ಕಾರವು ಕೇವಲ ತಾತ್ಕಾಲಿಕ ಪರಿಹಾರ ನೀಡುವ ಬದಲು ಬಡತನಕ್ಕೆ ಕಾರಣವಾಗುವ ಮೂಲ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಿದೆ ಎಂದು ಹೇಳಿದ್ದಾರೆ.
ಅಂತ್ಯೋದಯ ತತ್ವ ಮತ್ತು ಮೂಲಸೌಕರ್ಯಗಳ ಕ್ರಾಂತಿ
ಒಂದು ಕುಟುಂಬದ ಆದಾಯ ಹೆಚ್ಚಾದರೂ, ಅವರಿಗೆ ಸುರಕ್ಷಿತ ಮನೆ, ಶುದ್ಧ ನೀರು ಅಥವಾ ವೈದ್ಯಕೀಯ ಸೌಲಭ್ಯ ಇಲ್ಲದಿದ್ದರೆ ಅವರು ಅಪಾಯದಲ್ಲೇ ಇರುತ್ತಾರೆ. ಒಂದೇ ಒಂದು ಅನಾರೋಗ್ಯವು ಕುಟುಂಬದ ಇಡೀ ಉಳಿತಾಯವನ್ನು ಕರಗಿಸಿ ಅವರನ್ನು ಮತ್ತೆ ಬಡತನದ ಕೂಪಕ್ಕೆ ತಳ್ಳಬಹುದು ಎಂದು ವಿತ್ತ ಸಚಿವೆ ವಿಶ್ಲೇಷಿಸಿದ್ದಾರೆ. ಪ್ರಧಾನಿ ಮೋದಿ ಅವರು ಸ್ವತಃ ಯೋಜನೆಗಳ ಅನುಷ್ಠಾನದ ಮೇಲೆ ನಿಗಾ ವಹಿಸಿ, ತಂತ್ರಜ್ಞಾನದ ಮೂಲಕ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ತಲುಪುವಂತೆ ಮಾಡಿದ್ದಾರೆ. ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ತಲುಪಬೇಕು ಎಂಬ ‘ಅಂತ್ಯೋದಯ’ ತತ್ವವೇ ಸರ್ಕಾರದ ಕಾರ್ಯವೈಖರಿಗೆ ದಾರಿದೀಪವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.
ಸ್ವಚ್ಛ ಭಾರತ್ ಅಭಿಯಾನದಡಿ ಶೌಚಾಲಯ ನಿರ್ಮಾಣದಿಂದ ವಾರ್ಷಿಕ ಅಂದಾಜು 60,000 ದಿಂದ 70,000 ಶಿಶು ಮರಣಗಳು ತಪ್ಪಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಗ್ರಾಮೀಣ ನಲ್ಲಿ ನೀರಿನ ಸಂಪರ್ಕವು 2019ರಲ್ಲಿ ಸುಮಾರು 3 ಕೋಟಿ ಮನೆಗಳಷ್ಟಿದ್ದದ್ದು ಈಗ 16 ಕೋಟಿಗೆ ತಲುಪಿದ್ದು, ಮಹಿಳೆಯರ ನೀರಿನ ಬವಣೆ ತಪ್ಪಿಸಿದೆ. ಉಜ್ವಲ ಯೋಜನೆಯಿಂದ ಹೊಗೆಮುಕ್ತ ಅಡುಗೆಮನೆ, ಪಿಎಂ ಆವಾಸ್ ಯೋಜನೆಯಡಿ ಪಕ್ಕಾ ಮನೆಗಳು ಹಾಗೂ ಆಯುಷ್ಮಾನ್ ಭಾರತ್ ಮೂಲಕ ನಗದುರಹಿತ ಚಿಕಿತ್ಸೆ ದೊರೆಯುತ್ತಿದ್ದು, ಇವೆಲ್ಲವೂ ಬಡ ಕುಟುಂಬಗಳಿಗೆ ಆರ್ಥಿಕ ರಕ್ಷಣಾ ಕವಚಗಳಾಗಿ ಕೆಲಸ ಮಾಡುತ್ತಿವೆ ಎಂದು ಅವರು ವಿವರಿಸಿದ್ದಾರೆ.
ಆರ್ಥಿಕ ಸೇರ್ಪಡೆ,ಮಹಿಳಾ ಸಬಲೀಕರಣ
ದೇಶದಲ್ಲಿ 59 ಕೋಟಿಗೂ ಹೆಚ್ಚು ಜನಧನ ಖಾತೆಗಳನ್ನು ತೆರೆಯುವ ಮೂಲಕ ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿವೆ. ಹಿಂದೆ ಸರ್ಕಾರ ಬಿಡುಗಡೆ ಮಾಡುವ ಪ್ರತಿ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲುಪುತ್ತಿತ್ತು, ಆದರೆ ನೇರ ನಗದು ವರ್ಗಾವಣೆ (DBT) ಆ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ಇನ್ನು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ 60 ಕೋಟಿ ಸಾಲದ ಖಾತೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಇದರಲ್ಲಿ ಮೂರನೇ ಎರಡರಷ್ಟು ಪಾಲು ಮಹಿಳೆಯರದ್ದೇ ಆಗಿದೆ. ಇದರೊಂದಿಗೆ ಪಿಎಂ ಸ್ವನಿಧಿ ಮತ್ತು ಪಿಎಂ ವಿಶ್ವಕರ್ಮ ಯೋಜನೆಗಳು ಬೀದಿಬದಿ ವ್ಯಾಪಾರಿಗಳು ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ಬಲ ನೀಡಿವೆ ಎಂದು ಅವರು ತಿಳಿಸಿದ್ದಾರೆ.
ವಿಕಸಿತ ಭಾರತ 2047ರ ಗುರಿ
ಬಡತನ ನಿರ್ಮೂಲನೆಯಲ್ಲಿ ಸಾಧಿಸಿರುವ ಪ್ರಗತಿಯೇ ಅಂತಿಮವಲ್ಲ, ವಿಶ್ರಮಿಸಲು ಸಮಯವಿಲ್ಲ ಎಂದಿರುವ ಹಣಕಾಸು ಸಚಿವರು, ಆರ್ಥಿಕ ಏಣಿಯ ಕೆಳಹಂತದಲ್ಲಿ ಉಳಿದಿರುವವರನ್ನು ಮೇಲೆತ್ತುವುದು ಮತ್ತು ಬಡತನದಿಂದ ಹೊರಬಂದವರು ಮತ್ತೆ ಹಿಂದಕ್ಕೆ ಸರಿಯದಂತೆ ನೋಡಿಕೊಳ್ಳುವುದು ಸರ್ಕಾರದ ಮುಂದಿನ ಹಂತದ ಗುರಿಯಾಗಿದೆ ಎಂದಿದ್ದಾರೆ. ಶಿಕ್ಷಣ ಮತ್ತು ಉದ್ಯಮದ ನಡುವೆ ಬಲವಾದ ಸಂಪರ್ಕ ಕಲ್ಪಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕಿದೆ.
ಸ್ವಾತಂತ್ರ್ಯದ ನಂತರದ ಆರು ದಶಕಗಳಲ್ಲಿ ಸಾಧಿಸಲಾಗದ್ದನ್ನು ಕಳೆದ 10 ವರ್ಷಗಳಲ್ಲಿ ಸಾಧಿಸಲಾಗಿದ್ದು, 140 ಕೋಟಿ ಭಾರತೀಯರ ಸಂಕಲ್ಪದೊಂದಿಗೆ 2047ರ ವೇಳೆಗೆ ‘ವಿಕಸಿತ ಭಾರತ’ದ ಗುರಿಯನ್ನು ನಾವು ಖಂಡಿತವಾಗಿಯೂ ತಲುಪಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


















