ನವದೆಹಲಿ: ಭಾರತೀಯ ಸೇನೆ, ಅರೆಸೇನಾ ಪಡೆಗಳು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಬಳಸುತ್ತಿರುವ ಹಲವು ಅನಧಿಕೃತ ವಾಟ್ಸ್ ಆ್ಯಪ್ ಗ್ರೂಪ್ಗಳೊಳಗೆ ಪಾಕಿಸ್ತಾನ ಮೂಲದ ಗುಪ್ತಚರ ಏಜೆಂಟರು (PIOs) ನುಸುಳಿರುವುದು ಭಾರತೀಯ ಸೈಬರ್ ಮತ್ತು ಗುಪ್ತಚರ ಸಂಸ್ಥೆಗಳ ತನಿಖೆಯಿಂದ ಬಯಲಾಗಿದೆ.
ಕಳೆದ ಮೂರು ತಿಂಗಳ ಕಾಲ ನಡೆದ ಸುದೀರ್ಘ ತನಿಖೆಯ ನಂತರ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಇದರ ಬೆನ್ನಲ್ಲೇ ದೇಶಾದ್ಯಂತ ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳ ವಾಟ್ಸಾಪ್ ಗ್ರೂಪ್ಗಳ ಬೃಹತ್ ಮಟ್ಟದ ಆಡಿಟ್ ಮತ್ತು ಸ್ವಚ್ಛತಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾದವರನ್ನು ಹೊರತುಪಡಿಸಿ, ಇನ್ನೂ ಎರಡು ಡಜನ್ಗೂ ಹೆಚ್ಚು ಅಧಿಕಾರಿಗಳು ತನಿಖಾ ಸಂಸ್ಥೆಗಳ ಹದ್ದಿನ ಕಣ್ಣಿನಲ್ಲಿದ್ದಾರೆ.
‘ಡೆಡ್ ಮೆಂಬರ್ಸ್’ ಆಗಿ ಮಾಹಿತಿ ಕದಿಯುತ್ತಿದ್ದ ಪಾಕ್ ಏಜೆಂಟರು
ತನಿಖಾ ಮೂಲಗಳ ಪ್ರಕಾರ, ಪಾಕಿಸ್ತಾನದ ಗೂಢಚಾರರು ನಕಲಿ ಅಥವಾ ಹ್ಯಾಕ್ ಮಾಡಲಾದ ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಸುಮಾರು 50ಕ್ಕೂ ಹೆಚ್ಚು ಅನಧಿಕೃತ ವಾಟ್ಸಾಪ್ ಗ್ರೂಪ್ಗಳಿಗೆ ಅಕ್ರಮವಾಗಿ ಪ್ರವೇಶ ಪಡೆದಿದ್ದರು. ಕಳೆದ ವರ್ಷದಿಂದಲೇ ಈ ಗ್ರೂಪ್ಗಳಲ್ಲಿದ್ದ ಪಾಕ್ ಏಜೆಂಟರು, ಯಾವುದೇ ಸಂದೇಶ ಕಳುಹಿಸದೆ ಕೇವಲ ‘ಮೂಕ ಸದಸ್ಯರಾಗಿ’ (Dead members) ಸೇನಾ ಸಿಬ್ಬಂದಿ ಮತ್ತು ನಾಗರಿಕ ಉದ್ಯೋಗಿಗಳ ನಡುವಿನ ಸಂಭಾಷಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆ (NSG), ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಕಮಾಂಡೋಗಳ ವಿವರಗಳು, ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಳ್ಳುವ ಡಜನ್ಗೂ ಹೆಚ್ಚು ಪ್ರಮುಖ ಗ್ರೂಪ್ಗಳನ್ನು ಸೈಬರ್ ಸಂಸ್ಥೆಗಳು ಪತ್ತೆಹಚ್ಚಿವೆ.
ನಾಗರಿಕ ಉದ್ಯೋಗಿಗಳ ಬಳಕೆ ಮತ್ತು ನಕಲಿ ಪರಿಚಯ
ಈ ಭದ್ರತಾ ಲೋಪ ಕೇವಲ ಸಮವಸ್ತ್ರಧಾರಿ ಸಿಬ್ಬಂದಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವು ನಾಗರಿಕ ಉದ್ಯೋಗಿಗಳು ಮತ್ತು ಮಧ್ಯವರ್ತಿಗಳನ್ನು ಬಳಸಿಕೊಂಡು ಅನಧಿಕೃತ ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿ, ಅದಕ್ಕೆ ರಕ್ಷಣಾ ಸಿಬ್ಬಂದಿಯನ್ನು ಸೇರಿಸಲಾಗಿತ್ತು. ಹಿಂದೆ ಆಡಿಟ್ ನಡೆದಾಗಲೆಲ್ಲಾ ಈ ಪಾಕಿಸ್ತಾನಿ ಏಜೆಂಟರು, ತಾವು ಸಂಶೋಧನಾ ವಿಭಾಗದ ಅಥವಾ ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗದ ಸೇನೆಯ ಅಪರಿಚಿತ ವಿಭಾಗಗಳ ಅಧಿಕಾರಿಗಳು ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ತಿಳಿದುಬಂದಿದೆ.
ತಕ್ಷಣವೇ ಗ್ರೂಪ್ಗಳಿಂದ ಹೊರಬರಲು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ
ಗುಪ್ತಚರ ಇಲಾಖೆಯ ಎಚ್ಚರಿಕೆಯ ಬೆನ್ನಲ್ಲೇ ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಮತ್ತು ಇತರ ರಕ್ಷಣಾ ಸಂಸ್ಥೆಗಳಿಗೆ ತಕ್ಷಣದ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ವಾಟ್ಸಾಪ್ ಗ್ರೂಪ್ಗಳ ಅಡ್ಮಿನ್ಗಳು ತಮ್ಮ ಗ್ರೂಪ್ನಲ್ಲಿರುವ ಪ್ರತಿಯೊಬ್ಬ ಸದಸ್ಯರ ಗುರುತನ್ನು ಪರಿಶೀಲಿಸಿ, ಅಪರಿಚಿತ ಮತ್ತು ಅನುಮಾನಾಸ್ಪದ ಸಂಖ್ಯೆಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಲಾಗಿದೆ. ಅಲ್ಲದೆ, ಗುರುತಿಸಲಾದ ಇಂತಹ ಅನಧಿಕೃತ ಗ್ರೂಪ್ಗಳಲ್ಲಿರುವ ಸಿಬ್ಬಂದಿ ತಕ್ಷಣವೇ ಅವುಗಳಿಂದ ಹೊರಬರಬೇಕು ಮತ್ತು ಈ ಬಗ್ಗೆ ತಮ್ಮ ಇಲಾಖಾ ಮುಖ್ಯಸ್ಥರಿಗೆ ವರದಿ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
2026ರಲ್ಲಿ ಹೆಚ್ಚಾದ ಸೈಬರ್ ಬೇಹುಗಾರಿಕೆ ಪ್ರಕರಣಗಳು
ಭಾರತೀಯ ಮೊಬೈಲ್ ಸಂಖ್ಯೆಗಳು ಮತ್ತು ಸೋಶಿಯಲ್ ಎಂಜಿನಿಯರಿಂಗ್ ತಂತ್ರಗಳನ್ನು ಬಳಸಿಕೊಂಡು ರಕ್ಷಣಾ ಸಿಬ್ಬಂದಿಯನ್ನು ಗುರಿಯಾಗಿಸುವ ಪಾಕಿಸ್ತಾನದ ಸೈಬರ್ ಬೇಹುಗಾರಿಕೆ ಜಾಲ ಈ ವರ್ಷ ತೀವ್ರಗೊಂಡಿದೆ. ಕಳೆದ ಅಕ್ಟೋಬರ್ನಲ್ಲಿ ಆಂಧ್ರಪ್ರದೇಶದ ಕೌಂಟರ್ ಇಂಟೆಲಿಜೆನ್ಸ್ ‘ಆಪರೇಷನ್ ಫೈರ್ವಾಲ್-2026’ ಕಾರ್ಯಾಚರಣೆ ನಡೆಸಿ, 10 ರಾಜ್ಯಗಳಲ್ಲಿ ಹರಡಿದ್ದ ಪಾಕ್ ಸಂಪರ್ಕದ ಬೇಹುಗಾರಿಕೆ ಜಾಲವನ್ನು ಭೇದಿಸಿತ್ತು; ಇದರಲ್ಲಿ ನೌಕಾಪಡೆಯ 13 ಶಂಕಿತ ಸಿಬ್ಬಂದಿ ಸೇರಿದಂತೆ 18 ಜನರು ತನಿಖೆಗೆ ಒಳಪಟ್ಟಿದ್ದರು.
ಅಂತೆಯೇ, ಆಗಸ್ಟ್ನಲ್ಲಿ ಬಂಧಿತರಾಗಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಒಬ್ಬರು ಪಾಕ್ ಏಜೆಂಟ್ಗೆ ರಹಸ್ಯ ಕಾರ್ಯಾಚರಣೆಯ ಮಾಹಿತಿ ನೀಡಿದ್ದಲ್ಲದೆ, ತಮ್ಮ ಐವರು ಅಧೀನ ಅಧಿಕಾರಿಗಳ ಮೊಬೈಲ್ಗಳಲ್ಲಿ ಸ್ಪೈವೇರ್ ಅಳವಡಿಸಲು ಮುಂದಾಗಿದ್ದರು ಎಂದು ದೆಹಲಿ ಪೊಲೀಸರು ನವೆಂಬರ್ನಲ್ಲಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.


















