ಬೆಂಗಳೂರು: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ತೆರೆಯುವ ಕುರಿತು ಮಾತುಕತೆ, ಸಂಧಾನದ ಪ್ರಯತ್ನ ನಡೆಯುತ್ತಿರುವ ಹೊತ್ತಿನಲ್ಲೇ ಬುಧವಾರ (ಏಪ್ರಿಲ್ 15) ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ಇದರೊಂದಿಗೆ ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಖರೀದಿಸಬೇಕು ಎನ್ನುವವರಿಗೆ ಕಹಿ ಸುದ್ದಿ ದೊರೆತಂತಾಗಿದೆ.
22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬುಧವಾರ 130 ರೂಪಾಯಿ ಏರಿಕೆಯಾಗಿದೆ. ಇದೇ ರೀತಿ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 142 ರೂಪಾಯಿ ಏರಿಕೆಯಾಗಿದೆ. ಬೆಲೆಯೇರಿಕೆಯ ಬಳಿಕ ಬೆಂಗಳೂರಿನಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆಯು 1,42,400 ರೂಪಾಯಿ ಆಗಿದೆ. ಹಾಗೆಯೇ, 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆಯು 1,55,350 ರೂಪಾಯಿ ಆಗಿದೆ. ಮಂಗಳವಾರ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು.
ಬೆಳ್ಳಿ ಬೆಲೆಯಲ್ಲಿ 15 ಸಾವಿರ ರೂ. ಏರಿಕೆ
ಬುಧವಾರ ಬೆಳ್ಳಿಯ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿ ದರದಲ್ಲಿ ಬರೋಬ್ಬರಿ 15 ಸಾವಿರ ರೂಪಾಯಿ ಜಾಸ್ತಿಯಾಗಿದೆ. ಇದರೊಂದಿಗೆ ಒಂದು ಕೆ.ಜಿ ಬೆಳ್ಳಿ ಬೆಲೆಯೀಗ 2.7 ಲಕ್ಷ ರೂಪಾಯಿ ಆಗಿದೆ. ಷೇರು ಮಾರುಕಟ್ಟೆಯಲ್ಲೂ ಭಾರಿ ಏರಿಕೆ ಕಂಡುಬಂದಿದೆ. ಸೆನ್ಸೆಕ್ಸ್ 1 ಸಾವಿರ ಪಾಯಿಂಟ್ ಗಿಂತ ಜಾಸ್ತಿ ಏರಿಕೆ ಕಂಡರೆ, ನಿಫ್ಟಿ ಕೂಡ 300 ಪಾಯಿಂಟ್ ಗಳಿಗಿಂತ ಜಾಸ್ತಿ ಏರಿಕೆ ಕಂಡಿದೆ. ಇದು ಹೂಡಿಕೆದಾರರಿಗೆ ಸಿಹಿ ಸುದ್ದಿ ಎನಿಸಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಮತ್ತು ರಾಜಕೀಯ ಬಿಕ್ಕಟ್ಟುಗಳಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಮೊರೆ ಹೋಗುತ್ತಿದ್ದಾರೆ. ಹಾಗಾಗಿ, ಚಿನ್ನ, ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ, ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿನ ಏರಿಳಿತಗಳು ಕೂಡ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಲು ಕಾರಣವಾಗುತ್ತವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಆಗಮನ.. ಗುರು ಭೈರವೈಕ್ಯ ಮಂದಿರ ಉದ್ಘಾಟನೆ



















