ಬೆಂಗಳೂರು: ನಗರದ ರಿಂಗ್ ರಸ್ತೆ ಸಮೀಪದ ನಾಗದೇವನಹಳ್ಳಿಯಲ್ಲಿರುವ ಚಿತ್ರಕಲಾ ಶಾಲೆಯಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶಾಲೆಯ ಟಾಪ್ ಫ್ಲೋರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜ್ವಾಲೆಗಳು ವ್ಯಾಪಕವಾಗಿ ಹರಡಿರುವುದು ಕಂಡುಬಂದಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಬೆಂಕಿ ಕಾಣಿಸಿಕೊಂಡ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ.
ಶಾಲೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಯಾರೂ ಸ್ಥಳದಲ್ಲಿರಲಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಇನ್ನೊಂದೆಡೆ, ಶಾಲೆಯ ಸುತ್ತಮುತ್ತ ವಾಸಿಸುವ ನಿವಾಸಿಗಳು ಬೆಂಕಿಯ ಜ್ವಾಲೆ ಮತ್ತು ಹೊಗೆಯನ್ನು ಕಂಡು ಆತಂಕಗೊಂಡಿದ್ದಾರೆ. ಬೆಂಕಿಯಿಂದ ಉಂಟಾದ ಹಾನಿಯ ಪ್ರಮಾಣ ಮತ್ತು ಅವಘಡದ ನಿಖರ ಕಾರಣ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



















