ಮೈಸೂರು : ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಬಳಿ ಸಾವಿರಾರು ರೈತರು ಪ್ರತಿಭಟನೆ ನಡೆಸಿದ್ದಾರೆ.
ಜಲಾಶಯದಲ್ಲಿ ಸುಮಾರು 10 ಅಡಿ ನೀರು ಖಾಲಿಯಾದ ಬಳಿಕ ಎಚ್ಚೆತ್ತ ರೈತರು ಹಾಗೂ ಸ್ಥಳೀಯರು ಕಬಿನಿ ಡ್ಯಾಂಗೆ ಮುತ್ತಿಗೆ ಹಾಕಲು ಮುಂದಾದರು. ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ಸ್ಥಗಿತಗೊಳಿಸಿ, ರಾಜ್ಯದ ರೈತರ ಹಿತ ಹಾಗೂ ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕಬಿನಿ ಜಲಾಶಯದ ಎದುರು ಜಮಾಯಿಸಿದ ಸಾವಿರಾರು ರೈತರು ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಸಿಎಂ ವಿಜಯ್ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ.
ರೈತರ ಹಿತ ಕಾಪಾಡಿ, ಕುಡಿಯಲು ನೀರು ಉಳಿಸಿ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ರಾಜ್ಯದ ಜಲಸಂಪನ್ಮೂಲದ ಮೇಲೆ ಮೊದಲ ಆದ್ಯತೆ ಕರ್ನಾಟಕದ ರೈತರು ಹಾಗೂ ಜನರಿಗೆ ಇರಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಜಿಬಿಎ ಪ್ರತಿಭಾ ಪುರಸ್ಕಾರಕ್ಕೆ ಸಾರ್ವಜನಿಕರ ವಿರೋಧ


















