ಬೆಂಗಳೂರು : ಬೆಸ್ಕಾಂ ಆರ್ಥಿಕ ಶಿಸ್ತು ಹಾಗೂ ಸುಧಾರಿತ ಆದಾಯ ಸಂಗ್ರಹದ ಮೂಲಕ ಗಮನಾರ್ಹ ಸಾಧನೆ ಮಾಡಿದ್ದು, 2025-26ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 293.62 ಕೋಟಿ ರೂಪಾಯಿಗಳ ನಿವ್ವಳ ಲಾಭ ದಾಖಲಿಸಿದೆ.ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಬೆಸ್ಕಾಂನ 144ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ಆರ್ಥಿಕ ಸಾಧನೆ ಹಾಗೂ ಲಾಭಕ್ಕೆ ಕಾರಣವಾದ ಪ್ರಮುಖ ಅಂಶಗಳ ಕುರಿತು ಸಮಗ್ರ ವಿವರಗಳನ್ನು ಮಂಡಿಸಲಾಯಿತು. ನಿರಂತರ ಆರ್ಥಿಕ ಸವಾಲುಗಳ ನಡುವೆಯೂ ಬೆಸ್ಕಾಂ ತನ್ನ ಆಡಳಿತಾತ್ಮಕ ನೀತಿಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಲಾಭದ ಹಳಿಗೆ ಮರಳಿರುವುದು ರಾಜ್ಯದ ಇಂಧನ ವಲಯದಲ್ಲಿ ಸಕಾರಾತ್ಮಕ ಬೆಳವಣಿಗೆ.
ಆರ್ಥಿಕ ಶಿಸ್ತು ಮತ್ತು ಆದಾಯ ಸಂಗ್ರಹ
ಬೆಸ್ಕಾಂ ಮಾಡಿರುವ ಈ ಗಣನೀಯ ಲಾಭದ ಸಾಧನೆಯ ಹಿಂದೆ ಸಂಸ್ಥೆಯ ಆರ್ಥಿಕ ಶಿಸ್ತು ಮತ್ತು ವೆಚ್ಚ ಕಡಿತದ ಕಠಿಣ ಕ್ರಮಗಳು ಪ್ರಮುಖ ಪಾತ್ರ ವಹಿಸಿವೆ. ಸಭೆಯಲ್ಲಿ ಬೆಸ್ಕಾಂನ ಕಾರ್ಯವೈಖರಿಯನ್ನು ಶ್ಲಾಘಿಸಿದ ಸಚಿವ ಕೆ.ಜೆ. ಜಾರ್ಜ್, ಕೇವಲ ಆದಾಯ ಸಂಗ್ರಹವನ್ನು ಹೆಚ್ಚಿಸುವುದು ಮಾತ್ರವಲ್ಲದೆ ವಿದ್ಯುತ್ ಖರೀದಿಯ ಸಮರ್ಥ ನಿರ್ವಹಣೆ ಹಾಗೂ ಹಣಕಾಸು ವೆಚ್ಚಗಳ ಕಡಿತದಿಂದಾಗಿ ಈ ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಸಂಸ್ಥೆಯ ಆದಾಯವನ್ನು ಹೆಚ್ಚಿಸುವ ಹಾಗೂ ಅದೇ ಸಮಯದಲ್ಲಿ ಅನಗತ್ಯ ವೆಚ್ಚಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಮಾನ ಒತ್ತು ನೀಡಲಾಗಿದ್ದು, ಇದು ಬೆಸ್ಕಾಂನ ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ವಿವರಿಸಿದರು.
ಬಿಲ್ಲಿಂಗ್ ವ್ಯವಸ್ಥೆಯಲ್ಲಿನ ತಾಂತ್ರಿಕ ಸುಧಾರಣೆ
ಗ್ರಾಹಕರಿಂದ ಬಾಕಿ ವಸೂಲಿ ಹಾಗೂ ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ತಂದಿರುವ ನವೀನ ತಂತ್ರಜ್ಞಾನಗಳು ಬೆಸ್ಕಾಂನ ಆರ್ಥಿಕ ಸ್ಥಿತಿಯನ್ನು ತಳಮಟ್ಟದಿಂದ ಬಲಪಡಿಸಿವೆ. ಬಿಲ್ಲಿಂಗ್‌ನಲ್ಲಿ ಪ್ರೋಬ್ ರೀಡಿಂಗ್ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಮಾನವ ಹಸ್ತಕ್ಷೇಪ ಹಾಗೂ ದೋಷಗಳನ್ನು ತಗ್ಗಿಸಿ, ನಿಖರತೆಯನ್ನು ಹೆಚ್ಚಿಸಲಾಗಿದೆ. ಈ ಒಂದು ಕ್ರಮದಿಂದಾಗಿಯೇ ಅಂದಾಜು 100 ಮಿಲಿಯನ್ ಯೂನಿಟ್‌ಗಳಷ್ಟು ಹೆಚ್ಚುವರಿ ವಿದ್ಯುತ್ ಮಾರಾಟವನ್ನು ನಿಖರವಾಗಿ ದಾಖಲಿಸಲು ಮತ್ತು ಗರಿಷ್ಠ ಬೇಡಿಕೆಯನ್ನು ರಿಯಾಗಿ ಅಳೆಯಲು ಸಾಧ್ಯವಾಗಿದೆ. ಹೆಚ್ಚಿನ ಆದಾಯ ತರುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಲ್ಲಿ ಶೇಕಡಾ 100ರಷ್ಟು ಬಿಲ್ಲಿಂಗ್ ದಕ್ಷತೆಯನ್ನು ಸಾಧಿಸುವ ಗುರಿಯತ್ತ ಬೆಸ್ಕಾಂ ಕಾರ್ಯೋನ್ಮುಖವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಜತೆಗೆ, ನ್ಯಾಯಾಲಯ ಹಾಗೂ ನಿಯಂತ್ರಣ ಪ್ರಾಧಿಕಾರದಲ್ಲಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ, ಕ್ರಾಸ್ ಸಬ್ಸಿಡಿ ಮತ್ತು ಹೆಚ್ಚುವರಿ ಸರ್‌ಚಾರ್ಜ್‌ಗಳನ್ನು ಯಶಸ್ವಿಯಾಗಿ ವಸೂಲಿ ಮಾಡಲಾಗಿದೆ.
ವೆಚ್ಚ ನಿರ್ವಹಣೆ ಹಾಗೂ ಸಾಲದ ಹೊರೆ ಇಳಿಕೆ
ಬಾಕಿ ಉಳಿದಿದ್ದ ವಿದ್ಯುತ್ ಖರೀದಿ ವೆಚ್ಚ ಹಾಗೂ ಇತರ ಹಣಕಾಸು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿರುವುದು ಬೆಸ್ಕಾಂನ ಆರ್ಥಿಕ ಹೊರೆ ಇಳಿಸಲು ನೆರವಾಗಿದೆ. ಹೆಚ್ಚಿನ ಬಡ್ಡಿ ದರದ ಸಾಲಗಳನ್ನು ಮರುಹೊಂದಾಣಿಕೆ ಮಾಡುವ ಮೂಲಕ ಬಡ್ಡಿ ಪಾವತಿಯ ಮೇಲಿನ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಾಗಿದೆ. ವಿದ್ಯುತ್ ಉತ್ಪಾದಕರಿಗೆ ಪಾವತಿಸಬೇಕಿದ್ದ ಬಾಕಿಯನ್ನು ಕಂತುಗಳಲ್ಲಿ ಪಾವತಿಸುವ ಮೂಲಕ ‘ಲೇಟ್ ಪೇಮೆಂಟ್ ಸರ್‌ಚಾರ್ಜ್’ ಹೊರೆಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ, ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ (FPPA) ಮೊತ್ತವನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲಾಗಿದೆ. ನಿರಂತರ ಆದಾಯ ಸಂಗ್ರಹ, ವೆಚ್ಚ ಕಡಿತ ಮತ್ತು ಕಟ್ಟುನಿಟ್ಟಿನ ಆರ್ಥಿಕ ನಿರ್ವಹಣೆಯ ಪ್ರಯತ್ನಗಳ ಫಲವಾಗಿಯೇ ಈ ಲಾಭದ ಮೈಲಿಗಲ್ಲು ತಲುಪಲು ಸಾಧ್ಯವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : CEC ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ : ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣದ ಮರುತನಿಖೆಗೆ ಕೇರಳ ಸರ್ಕಾರ ಆದೇಶ!


















