ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯಾ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಆನ್‌ಲೈನ್ ಗೇಮ್ ವ್ಯಸನಕ್ಕೆ ಒಳಗಾದ ಯುವಕನೊಬ್ಬ ತನ್ನ ತಂದೆ, ತಾಯಿ ಹಾಗೂ ಅಕ್ಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಬಳಿಕ ಆತನು ಸಹ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಾಯಿ ನಾಯ್ಡು (18) ಎಂಬ ಯುವಕ ತನ್ನ ಕುಟುಂಬದವರ ಮೇಲೆ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಅಕ್ಕ ಪ್ರಗತಿ (20) ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ತಂದೆ ಯಂಕಣ್ಣ ನಾಯ್ಡು (48) ಅವರನ್ನು ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ತಾಯಿ ಸೌಜನ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿ ನಡೆಸಿದ ಸಾಯಿ ನಾಯ್ಡು ಕೂಡ ತನ್ನ ಮೇಲೆ ತಾನೇ ಚಾಕು ಇರಿದುಕೊಂಡಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಂಗಾವತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದೊಳಗಿನ ಕಲಹವೇ ಅಥವಾ ಆನ್‌ಲೈನ್ ಗೇಮ್ ವ್ಯಸನವೇ ಕೃತ್ಯಕ್ಕೆ ಕಾರಣವಾಯಿತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಈ ದುರ್ಘಟನೆ ಹೊಸ ಅಯೋಧ್ಯಾ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ರೌಡಿಶೀಟರ್ ಬರ್ಬರ ಹತ್ಯೆ ; ತಲ್ವಾರ್‌ನಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು!



















