ಬೆಂಗಳೂರು : ಕಣ್ಣ ಮುಂದೆಯೇ ಕೆಜಿಗಟ್ಟಲೇ ಬಂಗಾರ ಇದ್ದರೂ ತಿರುಗಿಯೂ ನೋಡದೆ, ಬೆಳ್ಳಿ ಮಾತ್ರ ಟಾರ್ಗೆಟ್ ಮಾಡಿಕೊಂಡು ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಿ ಮೇಲೆಯೇ ಕಣ್ಣು ಇಟ್ಟಿದ್ದ ಈ ಖದೀಮರ ಸ್ಟೈಲ್ ನೋಡಿ ಪೊಲೀಸರು ಕೂಡ ಅಚ್ಚರಿಗೊಂಡಿದ್ದಾರೆ.
ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಎಂಬಿ ಜ್ಯುವೆಲರ್ ಅಂಗಡಿಯಲ್ಲಿ ಏಪ್ರಿಲ್ 27ರ ಬೆಳಗಿನ ಜಾವ ಈ ಕಳ್ಳತನ ನಡೆದಿತ್ತು. ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ್ದ ಕಿಲಾಡಿಗಳು, ಅಂಗಡಿಯಲ್ಲಿದ್ದ ಬಂಗಾರವನ್ನು ಬಿಟ್ಟು ಕೆಜಿಗಟ್ಟಲೇ ಬೆಳ್ಳಿ ಆಭರಣ ಮತ್ತು ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು.
ಕಳ್ಳತನದ ಬಳಿಕ ಆರೋಪಿಗಳು ಕದ್ದ ಬೆಳ್ಳಿಯನ್ನು ಹೈದರಾಬಾದ್‌ನಲ್ಲಿ ಅರ್ಧ ಪ್ರಮಾಣದಲ್ಲಿ ಮಾರಾಟ ಮಾಡಿ, ನಂತರ ರಾಜಸ್ಥಾನಕ್ಕೆ ಎಸ್ಕೇಪ್ ಆಗಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬಾಗಲಗುಂಟೆ ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸಿ ರಾಜಸ್ಥಾನದಲ್ಲಿ ಜಾಟ್ ಸುರೇಶ್, ಧನರಾಮ್ ಹಾಗೂ ನೇಮಿ ಚಂದ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 36 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಗ್ಯಾಂಗ್‌ನ ಕಿಂಗ್‌ಪಿನ್ ಮಹೇಂದ್ರನಿಗಾಗಿ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸುವ ಸಾಧ್ಯತೆ ಇದೆ. ಪ್ರಕರಣದ ಕುರಿತು ಬಾಗಲಗುಂಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬೊಮ್ಮನಹಳ್ಳಿ ಜಲಾಶಯದಲ್ಲಿ ಕಾಡಾನೆ ಮೃತದೇಹ ಪತ್ತೆ!



















