ಬಳ್ಳಾರಿ : ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದ್ದು, ವಿದ್ಯುತ್ ದುರಸ್ತಿ ಕೆಲಸಕ್ಕಾಗಿ ಕಂಬ ಏರಿದ್ದ ದಿನಗೂಲಿ ಕಾರ್ಮಿಕ ವಿದ್ಯುತ್ ಪ್ರವಹಿಸಿ ಕಂಬದಲ್ಲೇ ನೇತಾಡಿ ಮೃತಪಟ್ಟಿರುವ ದಾರುಣ ಘಟನೆ ಸಂಗನಕಲ್ ಗ್ರಾಮದ ಬಳಿಯ ಧ್ಯಾನ ಮಂದಿರ ಸಮೀಪ ನಡೆದಿದೆ.
ಹುಲಗಪ್ಪ (22) ಮೃತ ದುರ್ದೈವಿ. ಯರ್ರಗುಡಿ ಗ್ರಾಮದ ನಿವಾಸಿಯಾಗಿದ್ದ ಹುಲಗಪ್ಪ, “ಕಾಪಾಡಿ… ಕಾಪಾಡಿ…” ಎಂದು ಕೂಗಾಡುತ್ತಲೇ ಸುಮಾರು 15 ನಿಮಿಷಗಳ ಕಾಲ ಕಂಬದ ಮೇಲೆಯೇ ನರಳಾಡಿ ಕೊನೆಗೆ ಪ್ರಾಣ ಬಿಟ್ಟಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮೃತ ಹುಲಗಪ್ಪ ದಿನಗೂಲಿ ಕಾರ್ಮಿಕನಾಗಿ ಕೆಲಸಕ್ಕೆ ಬಂದಿದ್ದು, ವಿದ್ಯುತ್ ಲೈನ್ ದುರಸ್ತಿ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲಸ ಆರಂಭಿಸುವ ಮುನ್ನ ಕಡ್ಡಾಯವಾಗಿ ಪಡೆಯಬೇಕಾದ ಎಲ್‌ಸಿ (ಲೈನ್ ಕ್ಲಿಯರೆನ್ಸ್) ಪಡೆಯದೇ ಕೆಲಸ ಮಾಡಿಸಲಾಗಿದೆ ಎಂದು ಜೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಲೇಬರ್ ಗುತ್ತಿಗೆದಾರರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಘಟನೆ ನಡೆದ ವೇಳೆ ಕೆಲ ಕಾರ್ಮಿಕರು ಸ್ಥಳದಲ್ಲಿದ್ದರೂ, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸಾಧ್ಯವಾಗದೇ ಹುಲಗಪ್ಪನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿ ಅಧಿಕಾರಿಗಳು ಹಾಗೂ ಲೈನ್‌ಮ್ಯಾನ್ ಇರಲಿಲ್ಲ ಎನ್ನಲಾಗಿದ್ದು, ನೆರವಿಗಾಗಿ ಕಿರುಚುತ್ತಲೇ ಹುಲಗಪ್ಪ ಕಂಬದ ಮೇಲೆಯೇ ನರಳಾಡಿ ಕೊನೆಯುಸಿರೆಳೆದಿದ್ದಾರೆ.
ಈ ದುರ್ಘಟನೆಗೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಲೇಬರ್ ಗುತ್ತಿಗೆದಾರರ ಬೇಜವಾಬ್ದಾರಿತನವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೆ ಜೀವ ಉಳಿಯುತ್ತಿತ್ತು ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಲವ್ ರಿಜೆಕ್ಟ್ ಮಾಡಿದ್ದಕ್ಕೆ ಪ್ರಿಯತಮೆಗೆ ಚಾಕು ಇರಿದ ಪ್ರಿಯಕರ!


















