ಉತ್ತರ ಕನ್ನಡ : ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಬೊಮ್ಮನಹಳ್ಳಿ ಜಲಾಶಯದಲ್ಲಿ ಗಂಡು ಕಾಡಾನೆಯ ಮೃತದೇಹ ಪತ್ತೆಯಾಗಿರುವ ಘಟನೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಜಲಾಶಯದ ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಕಾಡಾನೆಯ ಶವ ಕಂಡುಬಂದಿದ್ದು, ಸ್ಥಳೀಯರು ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಸುಮಾರು 9 ರಿಂದ 10 ವರ್ಷದ ವಯಸ್ಸಿನ ಗಂಡು ಕಾಡಾನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದು, ಜಲಾಶಯದಲ್ಲಿ ತೇಲುತ್ತಿದ್ದ ಕಾಡಾನೆಯ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಬಳಿಕ ಸ್ಥಳದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮೃತ ಕಾಡಾನೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ, ಕಾಡಾನೆಯ ಸಾವಿನ ನಿಖರ ಕಾರಣ ಇನ್ನೂ ನಿಗೂಢವಾಗಿದ್ದು, ವರದಿ ಬಂದ ಬಳಿಕವೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಓಡಾಟ ಸಾಮಾನ್ಯವಾಗಿದ್ದು, ಈ ಘಟನೆ ಅರಣ್ಯ ಇಲಾಖೆಯಲ್ಲೂ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಕುರಿತು ಅರಣ್ಯ ಇಲಾಖೆ ಹೆಚ್ಚಿನ ತನಿಖೆ ಮುಂದುವರೆಸಿದೆ.
ಇದನ್ನೂ ಓದಿ : ವಿಧಾನ ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್!



















