ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಆಗಸ್ಟ್ 31ರೊಳಗೆ ಚುನಾವಣೆ ನಡೆಸಲೇಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಚುನಾವಣೆಯನ್ನು ಮತ್ತೊಮ್ಮೆ ಮುಂದೂಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಈ ಸಂಬಂಧ ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಾಗಿದೆ ಎನ್ನಲಾಗಿದೆ.
ಈ ಬೆಳವಣಿಗೆಯ ನಡುವೆಯೇ, ಸುಪ್ರೀಂ ಕೋರ್ಟ್‌ಗೆ ಮಧ್ಯಪ್ರವೇಶ ಅರ್ಜಿ ಸಲ್ಲಿಸಿ, ಆಗಸ್ಟ್ 31ರೊಳಗೆ ಚುನಾವಣೆಯನ್ನು ಕಡ್ಡಾಯವಾಗಿ ನಡೆಸುವಂತೆ ನಿರ್ದೇಶನ ನೀಡುವಂತೆ ಮನವಿ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಲ್ಲಿ ಪ್ರಮುಖ ಸ್ಥಾನದಲ್ಲಿರುವ ಹಿರಿಯ ನಾಯಕರೊಬ್ಬರು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟು, ಚುನಾವಣೆ ಮುಂದೂಡಿಕೆಗೆ ಅವಕಾಶ ಸಿಗದಂತೆ ಕಾನೂನು ಹಾಗೂ ರಾಜಕೀಯ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮೂಲಗಳ ಪ್ರಕಾರ, “ಈಗ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ ಐದು ಪಾಲಿಕೆಗಳಲ್ಲಿ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಕಡಿಮೆ. ಇದೇ ಕಾರಣಕ್ಕೆ ಸರ್ಕಾರ ವಿವಿಧ ಕಾರಣಗಳನ್ನು ಮುಂದಿಟ್ಟು ಚುನಾವಣೆ ಮುಂದೂಡಲು ಯತ್ನಿಸುತ್ತಿದೆ. ಆದರೆ ಸುಪ್ರೀಂ ಕೋರ್ಟ್ ಇಂತಹ ವಾದವನ್ನು ಒಪ್ಪುವುದಿಲ್ಲ ಎಂಬ ವಿಶ್ವಾಸ ನಮಗಿದೆ” ಎಂದು ತಿಳಿಸಿವೆ.
ಇದೇ ವೇಳೆ, ಚುನಾವಣೆ ಮುಂದೂಡಿಕೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅಫಿಡವಿಟ್ ಕುರಿತು ಸುಪ್ರೀಂ ಕೋರ್ಟ್ ಸರ್ಕಾರ ಹಾಗೂ ಅಧಿಕಾರಿಗಳಿಂದ ಸ್ಪಷ್ಟನೆ ಕೇಳುವ ಸಾಧ್ಯತೆಯಿದ್ದು, ಆಗಸ್ಟ್ 31ರೊಳಗೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬಹುದು ಎಂಬ ವಿಶ್ವಾಸವನ್ನೂ ಬಿಜೆಪಿ ಮೂಲಗಳು ವ್ಯಕ್ತಪಡಿಸಿವೆ.
ಇದನ್ನೂ ಓದಿ : ರಾಜ್ಯದಲ್ಲಿ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ತಜ್ಞರ ಸಮಿತಿ ರಚನೆಗೆ ಸರ್ಕಾರ ಸಿದ್ಧತೆ!



















