ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹಾಲಿಗೆ ಡಿಟರ್ಜೆಂಟ್, ಎಮಲ್ಸಿಫೈಯರ್ ಹಾಗೂ ಇತರ ವಸ್ತುಗಳನ್ನು ಬಳಸಿ ಕಲಬೆರಕೆ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಹಾಲಿನ ಗುಣಮಟ್ಟ ಮತ್ತು ಪೌಷ್ಟಿಕಾಂಶ ಹೆಚ್ಚಿರುವಂತೆ ತೋರಿಸಲು ವಿವಿಧ ರಾಸಾಯನಿಕ ಹಾಗೂ ಪುಡಿ ಪದಾರ್ಥಗಳನ್ನು ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದ್ದು, ತನಿಖೆ ಇದೀಗ ಹಾಲು ಸಂಗ್ರಹ, ಶೀತಲೀಕರಣ ಮತ್ತು ಸಂಸ್ಕರಣಾ ಕೇಂದ್ರಗಳವರೆಗೂ ವಿಸ್ತರಿಸಿದೆ.
ಜುಲೈ 4ರಂದು ಎಫ್‌ಡಿಎ ಮತ್ತು ಪುಣೆ ಗ್ರಾಮೀಣ ಪೊಲೀಸರ ಸ್ಥಳೀಯ ಅಪರಾಧ ವಿಭಾಗದ ಜಂಟಿ ತಂಡವು ಅಂಬೇಗಾಂವ್ ತಾಲ್ಲೂಕಿನ ಅವಸರಿ ಖುರ್ದ್‌ನ ಭೋರಮಾಲಾ ಪ್ರದೇಶದಲ್ಲಿರುವ ನವ್ಕಾರ್ ಡಿಸ್ಟ್ರಿಬ್ಯೂಟರ್ಸ್ ಮೇಲೆ ದಾಳಿ ನಡೆಸಿತು. ಈ ವೇಳೆ ವಿವಿಧ ರೀತಿಯ ವ್ಹೇ ಪೌಡರ್, ವ್ಹೇ ಪರ್ಮಿಯೇಟ್ ಪೌಡರ್, ಡಿಟರ್ಜೆಂಟ್, ಎಮಲ್ಸಿಫೈಯರ್ ಸೇರಿದಂತೆ ಹಾಲು ಕಲಬೆರಕೆಗೆ ಬಳಸಿರಬಹುದೆಂದು ಶಂಕಿಸಲಾದ ವಸ್ತುಗಳು ಪತ್ತೆಯಾಗಿವೆ.
ಸೋನಾಯಿ, ಮ್ಲೆಕ್ಪೋಲ್, ಪ್ರಭಾತ್ ಡೇರಿ, ಮಿಲ್ಕಿ ಮಿಸ್ಟ್, ಪಾರಸ್ ಮತ್ತು ಗೋವರ್ಧನ್ ಸೇರಿದಂತೆ ವಿವಿಧ ಹೆಸರುಗಳಲ್ಲಿದ್ದ ಮಾದರಿ ಮತ್ತು ದಾಸ್ತಾನುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಚರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲಿನಲ್ಲೂ ಡಿಟರ್ಜೆಂಟ್ ಪತ್ತೆ
ತನಿಖೆಯ ವೇಳೆ ಪ್ರಮುಖ ಆರೋಪಿಯೊಬ್ಬರು ಹಾಲಿನ ಕಲಬೆರಕೆ ವಿಧಾನವನ್ನು ಬಹಿರಂಗಪಡಿಸಿದ್ದಾನೆ ಎಂದು ಎಫ್‌ಡಿಎ ತಿಳಿಸಿದೆ. ಸ್ಕಿಮ್ಡ್ ಮಿಲ್ಕ್ ಪೌಡರ್ ಮೂಲಕ ಹಾಲಿನ ಎಸ್‌ಎನ್‌ಎಫ್ ಅಂಶ ಹೆಚ್ಚಿಸುವುದು, ವ್ಹೇ ಪೌಡರ್ ಮೂಲಕ ಪ್ರೋಟೀನ್‌ಗೆ ಸಂಬಂಧಿಸಿದ ಅಂಶ ಹೆಚ್ಚಿಸುವುದು, ಕೊಬ್ಬಿನ ಪ್ರಮಾಣ ಹೆಚ್ಚಿಸಲು ಖಾದ್ಯ ತೈಲ ಬಳಸುವುದು ಮತ್ತು ವಿವಿಧ ಪದಾರ್ಥಗಳು ಸುಲಭವಾಗಿ ಮಿಶ್ರಣವಾಗಲು ಎಮಲ್ಸಿಫೈಯರ್ ಹಾಗೂ ಡಿಟರ್ಜೆಂಟ್ ಬಳಸಲಾಗುತ್ತಿತ್ತು ಎನ್ನಲಾಗಿದೆ.ತನಿಖೆಯ ಭಾಗವಾಗಿ ಜುಲೈ 6ರಂದು ಅಂಬೇಗಾಂವ್‌ನ ಮಂಚರ್‌ನಲ್ಲಿರುವ ಆಕಾಶ್ ಡೇರಿ ಫಾರ್ಮ್‌ನಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದರು. ಇಲ್ಲಿ ಪಿರ್ಸಾಯಿ ಮಿಲ್ಕ್ ಆ್ಯಂಡ್ ಮಿಲ್ಕ್ ಪ್ರಾಡಕ್ಟ್ಸ್ ಸೇರಿದಂತೆ ವಿವಿಧ ಡೇರಿಗಳಿಂದ ಬಂದ ಹಾಲನ್ನು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರು ಮಾದರಿಗಳಲ್ಲೂ ಡಿಟರ್ಜೆಂಟ್ ಪತ್ತೆ
ಆಕಾಶ್ ಡೇರಿ ಫಾರ್ಮ್‌ನಿಂದ ಸಂಗ್ರಹಿಸಲಾದ ಆರು ಹಾಲಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೆಪ್ಟೆಂಬರ್ 28ರಂದು ಬಂದ ಎಫ್‌ಡಿಎ ಪ್ರಯೋಗಾಲಯದ ವರದಿಯ ಪ್ರಕಾರ, ಎಲ್ಲಾ ಆರು ಮಾದರಿಗಳಲ್ಲೂ ಡಿಟರ್ಜೆಂಟ್ ಪತ್ತೆಯಾಗಿದೆ. ಪೂರಕ ವರದಿಯಲ್ಲಿ ಆರು ಮಾದರಿಗಳಲ್ಲೂ ಆಲ್ಫಾಕ್ಸ್-200 ಎಥಾಕ್ಸಿಲೇಟ್ ಎಂದು ಗುರುತಿಸಲಾದ ನಾನೈಲ್‌ಫಿನಾಲ್ ಎಥಾಕ್ಸಿಲೇಟ್ ರಾಸಾಯನಿಕ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.ಇದರ ಜೊತೆಗೆ ಮಾದರಿಗಳಲ್ಲಿನ ಕೊಬ್ಬು ಮತ್ತು ಎಸ್‌ಎನ್‌ಎಫ್ ಪ್ರಮಾಣವೂ ನಿಗದಿತ ಮಾನದಂಡಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ.
ಸೋನಾಯಿ ಡೇರಿವರೆಗೂ ತನಿಖೆ ವಿಸ್ತರಣೆ
ಕಲಬೆರಕೆಯ ಹಾಲಿನ ಪೂರೈಕೆ ಸರಪಳಿಯು ಇಂಡಾಪುರದ ಗೋಖಾಲಿಯಲ್ಲಿರುವ ಇಂಡಾಪುರ ಡೇರಿ ಆ್ಯಂಡ್ ಮಿಲ್ಕ್ ಪ್ರಾಡಕ್ಟ್ಸ್ ಲಿಮಿಟೆಡ್, ಅಂದರೆ ಸೋನಾಯಿ ಡೇರಿಯೊಂದಿಗೆ ಪ್ರಾಥಮಿಕವಾಗಿ ಸಂಪರ್ಕ ಹೊಂದಿರುವ ಸಾಧ್ಯತೆಯನ್ನು ಎಫ್‌ಡಿಎ ತನಿಖೆಯಲ್ಲಿ ಗುರುತಿಸಿದೆ. ಕಲಬೆರಕೆ ಪದಾರ್ಥಗಳನ್ನು ಪೂರೈಸಿದವರಿಂದ ಹಿಡಿದು ಹಾಲು ಸಂಗ್ರಹ, ಶೀತಲೀಕರಣ ಮತ್ತು ಸಂಸ್ಕರಣಾ ಕೇಂದ್ರಗಳವರೆಗೆ ಸಂಪೂರ್ಣ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ.ಈ ಸಂಬಂಧ ಮಲ್ಶಿರಸ್‌ನಲ್ಲೂ ಎಫ್‌ಡಿಎ ಎರಡು ಪ್ರಕರಣಗಳನ್ನು ದಾಖಲಿಸಿದೆ. ಕಾರ್ಯಾಚರಣೆಯ ವೇಳೆ ಒಟ್ಟು 16,730 ಲೀಟರ್ ಹಾಲನ್ನು ನಾಶಪಡಿಸಲಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು 6.69 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಕಲಬೆರಕೆ ಜಾಲದಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ :ಸಂಜೆ ವಾಕಿಂಗ್‌ಗೆ ತೆರಳಿದ್ದ ಪ್ರಾಧ್ಯಾಪಕನ ಅಪಹರಣ; ಮೊಬೈಲ್ ಪಾಸ್‌ವರ್ಡ್ ಪಡೆದು 1 ಲಕ್ಷ ರೂಪಾಯಿ ದೋಚಿದ ದುಷ್ಕರ್ಮಿಗಳು!



















