ನಾಸಿಕ್ : ಮಹಾರಾಷ್ಟ್ರದ ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಯುವ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಕಿರುಕುಳ, ಶೋಷಣೆ ಹಾಗೂ ಮತಾಂತರ ಯತ್ನದ ಕರಾಳ ಮುಖಗಳು ಇದೀಗ ಒಂದೊಂದಾಗಿ ಬಯಲಾಗುತ್ತಿವೆ. ಕಳೆದ ಆರು ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ತಮಗಾದ ಆಘಾತಕಾರಿ ಅನುಭವವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದು, ಕಚೇರಿಯೊಳಗಿನ ‘ಕರಾಳ ಸಂಸ್ಕೃತಿ’ಯನ್ನು ಬಯಲಿಗೆಳೆದಿದ್ದಾರೆ.
ನಾಸಿಕ್ ಕಚೇರಿಗೆ ವರ್ಗಾವಣೆಗೊಂಡ ನಂತರ, ಈ ಮಹಿಳೆಯನ್ನು ಮುಖ್ಯ ಕಟ್ಟಡದಿಂದ ಪ್ರತ್ಯೇಕಿಸಿ ಟೆರೇಸ್ ಮೇಲೆ ಒಂಟಿಯಾಗಿ ಕೆಲಸ ಮಾಡುವಂತೆ ಒತ್ತಾಯಿಸಲಾಗಿತ್ತು. ಭದ್ರತೆಯ ನೆಪವೊಡ್ಡಿ ಆಕೆಯ ಮೊಬೈಲ್ ಫೋನ್ ಮತ್ತು ಬ್ಯಾಗ್ ಸೇರಿದಂತೆ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಕಸಿದುಕೊಳ್ಳಲಾಗುತ್ತಿತ್ತು ಎಂದು ಸಂತ್ರಸ್ತೆ ವಿವರಿಸಿದ್ದಾರೆ.
ಕಚೇರಿಯಲ್ಲಿ 20 ರಿಂದ 25 ವರ್ಷ ವಯಸ್ಸಿನ ಯುವತಿಯರನ್ನು ಬಹಳ ಸುಲಭವಾಗಿ ಗುರಿಯಾಗಿಸಿಕೊಳ್ಳಲಾಗುತ್ತಿತ್ತು. ಅವರನ್ನು ಬ್ರೈನ್‌ವಾಶ್ ಮಾಡಿ, ಶೋಷಣೆಗೆ ಒಳಪಡಿಸುತ್ತಿದ್ದ ಈ ಜಾಲದಿಂದ “ಬದುಕುಳಿದದ್ದೇ ನನ್ನ ಪುಣ್ಯ, ಇಲ್ಲದಿದ್ದರೆ ಇಂದು ನನಗೂ ಅದೇ ಗತಿ ಬರುತ್ತಿತ್ತು” ಎಂದು ಅವರು ಆತಂಕದಿಂದ ನುಡಿದಿದ್ದಾರೆ.
ಮತಾಂತರದ ಸಂಚು
ಕಚೇರಿಯಲ್ಲಿ ನಡೆಯುತ್ತಿದ್ದ ಈ ವ್ಯವಸ್ಥಿತ ಜಾಲದ ಹಿಂದೆ ದೊಡ್ಡ ಸಂಚೇ ಅಡಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಉದ್ಯೋಗಿ ತಿಳಿಸಿರುವಂತೆ, ಹಿಂದೂ ಹುಡುಗಿಯರನ್ನು ಪ್ರೇಮಪಾಶಕ್ಕೆ ಬೀಳಿಸಿ, ವಿವಾಹವಾಗಿ ಮತಾಂತರ ಮಾಡುವಂತೆ ಪುರುಷ ಉದ್ಯೋಗಿಗಳಿಗೆ ಪ್ರಚೋದಿಸಲಾಗುತ್ತಿತ್ತು. ಇದಕ್ಕಾಗಿ ಹಣದ ಆಮಿಷವನ್ನೂ ಒಡ್ಡಲಾಗುತ್ತಿತ್ತು. 2021 ರಿಂದಲೇ ಈ ದಂಧೆ ನಡೆಯುತ್ತಿದ್ದು, ಮಾನವ ಸಂಪನ್ಮೂಲ (HR) ವಿಭಾಗದ ಅಧಿಕಾರಿಗಳ ಬೆಂಬಲವೂ ಇದಕ್ಕಿತ್ತು ಎಂದು ಆರೋಪಿಸಲಾಗಿದೆ.
ಮಹಿಳಾ ಉದ್ಯೋಗಿಗಳು ತಮಗಾಗುತ್ತಿರುವ ಕಿರುಕುಳದ ಬಗ್ಗೆ ದೂರು ನೀಡಲು ಹೋದಾಗ, ಅವರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಮಾನವ ಸಂಪನ್ಮೂಲ ವ್ಯವಸ್ಥಾಪಕಿಯಾಗಿದ್ದ ನಿದಾ ಖಾನ್ ಬೆದರಿಕೆ ಹಾಕುತ್ತಿದ್ದಳು. “ಲೇಡಿ ಕ್ಯಾಪ್ಟನ್” ಎಂದೇ ಕರೆಯಲ್ಪಡುತ್ತಿದ್ದ ನಿದಾ ಖಾನ್, ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ, ಕ್ರಮೇಣ ಅವರಿಗೆ ನಮಾಜ್ ಮಾಡಲು ಮತ್ತು ಹಿಜಾಬ್ ಧರಿಸಲು ಪ್ರೇರೇಪಿಸುತ್ತಿದ್ದಳು ಎಂಬ ಆಘಾತಕಾರಿ ಸಂಗತಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
7 ಮಂದಿಯ ಬಂಧನ
ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 2022ರಿಂದ ಮಾರ್ಚ್ 2026ರ ಅವಧಿಯಲ್ಲಿ ಎಂಟು ಮಹಿಳಾ ಉದ್ಯೋಗಿಗಳು ನೀಡಿದ 9 ದೂರುಗಳ ಆಧಾರದ ಮೇಲೆ ನಾಸಿಕ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದಕ್ಕಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ದಾನಿಶ್ ಶೇಖ್, ತೌಸಿಫ್ ಅತ್ತಾರ್, ರಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರಿ ಮತ್ತು ಹೆಚ್‌ಆರ್ ಮ್ಯಾನೇಜರ್ ನಿದಾ ಖಾನ್ ಸೇರಿದಂತೆ ಒಟ್ಟು ಏಳು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ನಡುವೆ, ಸಂತ್ರಸ್ತರ ಸಂಪರ್ಕದಲ್ಲಿದ್ದ ಮತ್ತೊಬ್ಬ ಮಹಿಳಾ ಉದ್ಯೋಗಿ ನಾಪತ್ತೆಯಾಗಿದ್ದು, ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬಂಧಿತರಲ್ಲಿ ಒಬ್ಬ ಮಹಿಳೆಯೊಬ್ಬರಿಗೆ ಮದುವೆಯ ಸುಳ್ಳು ಭರವಸೆ ನೀಡಿ ದೈಹಿಕವಾಗಿ ಬಳಸಿಕೊಂಡಿದ್ದಲ್ಲದೆ, ಆಕೆಯ ಖಾಸಗಿ ಜೀವನದ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ. ಕಚೇರಿಯ ಮುಖ್ಯಸ್ಥರಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಬದಲಾಗಿ ಅವರು ಆರೋಪಿಗಳಿಗೆ ಕುಮ್ಮಕ್ಕು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉದ್ಯಮದ ಗಣ್ಯರ ಪ್ರತಿಕ್ರಿಯೆ
ಪ್ರಕರಣವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಟಿಸಿಎಸ್ ಆಡಳಿತ ಮಂಡಳಿ, ಬಂಧಿತ ಎಲ್ಲಾ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. “ಯಾವುದೇ ರೀತಿಯ ಕಿರುಕುಳ ಅಥವಾ ಬಲವಂತವನ್ನು ಸಂಸ್ಥೆ ಸಹಿಸುವುದಿಲ್ಲ. ನಾಸಿಕ್ ಪ್ರಕರಣದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗಿದೆ ಹಾಗೂ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ” ಎಂದು ಟಿಸಿಎಸ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಘಟನೆಯನ್ನು “ಅತ್ಯಂತ ಕಳವಳಕಾರಿ ಮತ್ತು ನೋವಿನ ಸಂಗತಿ” ಎಂದು ಬಣ್ಣಿಸಿದ್ದು, ಟಿಸಿಎಸ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಆರಿನ್ ಕ್ಯಾಪಿಟಲ್ ಅಧ್ಯಕ್ಷ ಮೋಹನ್‌ದಾಸ್ ಪೈ ಅವರು ಆಘಾತ ವ್ಯಕ್ತಪಡಿಸಿದ್ದು, “ಟಿಸಿಎಸ್‌ನಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗವೇ ಕೋಮುವಾದಿ ಶಕ್ತಿಗಳ ಕೈವಶವಾಗಿರುವುದು ಮತ್ತು ವ್ಯವಸ್ಥೆಯ ಈ ವೈಫಲ್ಯ ನಂಬಲಸಾಧ್ಯ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ನಾಸಿಕ್ ಕಚೇರಿಯ ಎಲ್ಲಾ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ.
ಇದನ್ನೂ ಓದಿ : ಕುರಿಗಾಹಿ ಮೇಲೆ ಮೊಸಳೆ ಅಟ್ಯಾಕ್ – ಬಲಗೈ ಕಟ್!


















