ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ನಾಯಕತ್ವ ಹಾಗೂ ತಂಡದಲ್ಲಿನ ಸ್ಥಾನ ಕಳೆದುಕೊಂಡಿರುವ ಅವರು ಇದೀಗ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಅವರು ನೆಟ್ಸ್ ಅಭ್ಯಾಸದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ರಿಜ್ವಾನ್ ಅವರ ಕಾಲೆಳೆದು ಸುದ್ದಿಯಾಗಿದ್ದಾರೆ.
ಮಂಗಳವಾರದ ಒಳಾಂಗಣ ನೆಟ್ಸ್ ಅಭ್ಯಾಸದ ವಿಡಿಯೋವೊಂದನ್ನು ಸೂರ್ಯಕುಮಾರ್ ಯಾದವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮೊಹಮ್ಮದ್ ರಿಜ್ವಾನ್ ಅವರ ಇಂಗ್ಲಿಷ್ ಭಾಷೆಯ ಬಳಕೆಯನ್ನು ಲೇವಡಿ ಮಾಡಿದ್ದಾರೆ. ಈ ಹಿಂದೆ ಮೊಹಮ್ಮದ್ ರಿಜ್ವಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ರಿಜ್ವಾನ್ ವಿಕೆಟ್‌ಗಳ ನಡುವೆ ಓಡುವಾಗ ಅಥವಾ ಮೈದಾನದಲ್ಲಿ ಪ್ರತಿಕ್ರಿಯಿಸುವಾಗ ‘ಓಹ್ ಯೆಸ್, ಇಟ್ಸ್ ಎ ಟು’ (Oh yes, it’s a two!) ಎಂದು ಜೋರಾಗಿ ಕಿರುಚುತ್ತಿದ್ದದ್ದು ಅಭಿಮಾನಿಗಳ ಟ್ರೋಲ್‌ಗೆ ಗುರಿಯಾಗಿತ್ತು.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸೂರ್ಯಕುಮಾರ್ ಯಾದವ್ ಪರೋಕ್ಷವಾಗಿ ರಿಜ್ವಾನ್ ಅವರ ಕಾಲೆಳೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ವಿಡಿಯೋಗೆ ‘ಯೆಸ್ ಇಸ್ ಎ ಒನ್’ (Yes is a one) ಎಂದು ತಮಾಷೆಯಾಗಿ ಕ್ಯಾಪ್ಷನ್ ನೀಡಿದ್ದು, ಇದು ರಿಜ್ವಾನ್ ಅವರ ಪ್ರಸಿದ್ಧ ಡೈಲಾಗ್ ಅನ್ನು ಅನುಕರಿಸಿದಂತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಮಜವಾದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಈ ಹಿಂದೆಯೂ ಪಾಕ್ ಆಟಗಾರರನ್ನು ಟ್ರೋಲ್ ಮಾಡಿದ್ದ ಸ್ಕೈ
ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ಆಟಗಾರರನ್ನು ಟ್ರೋಲ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2026ರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಪಾಕ್ ಟೆಸ್ಟ್ ತಂಡದ ನಾಯಕ ಬಾಬರ್ ಆಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಅವರನ್ನು ಅನುಕರಿಸಿ ಕಾಲೆಳೆದಿದ್ದರು. ಬಾಬರ್ ಹಾಗೂ ರಿಜ್ವಾನ್ ಮೈದಾನದಲ್ಲಿ ವಿಚಿತ್ರವಾಗಿ ಸ್ಟ್ರೆಚಿಂಗ್ ಹಾಗೂ ವಾರ್ಮ್-ಅಪ್ ಮಾಡುತ್ತಿದ್ದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ವಿಡಿಯೋವನ್ನು ನೆನಪಿಸುವ ರೀತಿಯಲ್ಲಿ ಸೂರ್ಯಕುಮಾರ್ ಯಾದವ್ ನೆಟ್ಸ್‌ನಲ್ಲಿ ಗಂಭೀರ ಮುಖಭಾವದೊಂದಿಗೆ ಫನ್ನಿಯಾಗಿ ಸ್ಕ್ವಾಟ್ಸ್ ಮಾಡಿ ಪಾಕ್ ಆಟಗಾರರ ಕಾಲೆಳೆದಿದ್ದರು.
ಟೀಮ್ ಇಂಡಿಯಾಗೆ ಮರಳುವ ತವಕದಲ್ಲಿ ಸೂರ್ಯಕುಮಾರ್ ಯಾದವ್
2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿ ಮೂರನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿತ್ತು. ಆದರೆ ಈ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ವೈಯಕ್ತಿಕ ಪ್ರದರ್ಶನ ಕಳಪೆಯಾಗಿತ್ತು. 9 ಪಂದ್ಯಗಳನ್ನಾಡಿದ್ದ ಅವರು ಕೇವಲ ಒಂದು ಅರ್ಧಶತಕದೊಂದಿಗೆ 241 ರನ್ ಮಾತ್ರ ಗಳಿಸಿದ್ದರು.
ವಿಶ್ವಕಪ್ ಬಳಿಕ ನಡೆದ 2026ರ ಐಪಿಎಲ್ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಪರ ಆಡಿದ ಸೂರ್ಯಕುಮಾರ್ ಯಾದವ್ ನಿರಾಸೆ ಮೂಡಿಸಿದ್ದರು. ಟೂರ್ನಿಯಲ್ಲಿ 150ಕ್ಕೂ ಕಡಿಮೆ ಸ್ಟ್ರೈಕ್ ರೇಟ್ ಹಾಗೂ 20ರ ಆಸುಪಾಸಿನ ಸರಾಸರಿಯಲ್ಲಿ ಕೇವಲ 270 ರನ್ ಗಳಿಸಿ ಕಳಪೆ ಫಾರ್ಮ್‌ನಿಂದ ಬಳಲಿದ್ದರು. ಹೀಗಾಗಿ ಅವರು ಟೀಮ್ ಇಂಡಿಯಾದ ನಾಯಕತ್ವ ಹಾಗೂ ತಂಡದಲ್ಲಿನ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಇದೀಗ ಟಿ20 ಮುಂಬೈ 2026 ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಸೂರ್ಯಕುಮಾರ್ ಯಾದವ್, ಕಠಿಣ ಅಭ್ಯಾಸದ ಮೂಲಕ ಮತ್ತೆ ಟೀಮ್ ಇಂಡಿಯಾ ಕದ ಬಡಿಯುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ : 2,000 ರೂ.ಗೂ ಹೆಚ್ಚಿನ UPI ಪಾವತಿಗೆ ಶುಲ್ಕ ವಿಧಿಸಲು ಕಾನೂನು ತಿದ್ದುಪಡಿ ಪ್ರಸ್ತಾಪ : ಗ್ರಾಹಕರಿಗೆ ಇದೆಯಾ ತೊಂದರೆ?


















