ಬೆಂಗಳೂರು: ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳನ್ನು (Digital Fraud) ತಡೆಗಟ್ಟಲು ಮತ್ತು ಗ್ರಾಹಕರಿಗೆ ತಮ್ಮ ಹಣದ ಮೇಲೆ ಹೆಚ್ಚಿನ ನಿಯಂತ್ರಣ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಕರಡು ನಿಯಮಗಳನ್ನು ಪ್ರಸ್ತಾಪಿಸಿದೆ. ಹೆಚ್ಚಿನ ಮೊತ್ತದ ಆನ್ ಲೈನ್ ವರ್ಗಾವಣೆಗಳಿಗೆ ಅನುಮೋದನೆ ಹಾಗೂ ಸೈಬರ್ ವಂಚನೆಯ ಶಂಕೆ ಬಂದಾಗ ತಕ್ಷಣ ಹಣ ವರ್ಗಾವಣೆ ತಡೆಯಲು ‘ಸ್ಟಾಪ್ ಸ್ವಿಚ್’ (Stop Switch) ಸೌಲಭ್ಯವನ್ನು ಈ ಕರಡಿನಲ್ಲಿ ಸೇರಿಸಲಾಗಿದೆ.
ಪ್ರಮುಖ ಪ್ರಸ್ತಾವನೆಗಳು ಯಾವವು?
- ‘ಸ್ಟಾಪ್ ಸ್ವಿಚ್’ (Stop Switch) ತುರ್ತು ಸೌಲಭ್ಯ
ಗ್ರಾಹಕರ ಖಾತೆ ಅಥವಾ ಲಾಗಿನ್ ವಿವರಗಳು ದುರುಪಯೋಗವಾಗುತ್ತಿವೆ ಎಂಬ ಶಂಕೆ ಮೂಡಿದ ತಕ್ಷಣ, ಗ್ರಾಹಕರು ಸ್ಟಾಪ್ ಸ್ವಿಚ್ ಆನ್ ಮಾಡುವ ಮೂಲಕ ತಮ್ಮ ಖಾತೆಯಿಂದ ನಡೆಯುವ ಎಲ್ಲಾ ಡೆಬಿಟ್ ವಹಿವಾಟುಗಳನ್ನು ತಕ್ಷಣ ನಿಲ್ಲಿಸಬಹುದು.
• ಬ್ಯಾಂಕ್ ಶಾಖೆ, ಎಟಿಎಂ, ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್) ಮೂಲಕ ಈ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ.
• ಹೊಸ ಪಾವತಿ ಮ್ಯಾಂಡೇಟ್ ಗಳು, ಸ್ಟ್ಯಾಂಡಿಂಗ್ ಇನ್ ಸ್ಟ್ರಕ್ಷನ್ ಗಳು ಅಥವಾ ಹೊಸ ಥರ್ಡ್-ಪಾರ್ಟಿ ಆ್ಯಪ್ ಗಳಲ್ಲಿ ಯುಪಿಐ ನೋಂದಣಿಯನ್ನು ಇದು ತಡೆಯುತ್ತದೆ.
• ಇಡೀ ಖಾತೆ ಸ್ಥಗಿತವಾಗುವುದಿಲ್ಲ: ಖಾತೆಗೆ ಹಣ ಜಮಾ ಆಗುವುದು, ಸಾಲದ ಕಂತುಗಳು ಅಥವಾ ಬ್ಯಾಂಕ್ ಶುಲ್ಕಗಳು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ರೆಕರಿಂಗ್ ಪಾವತಿಗಳಿಗೆ ಇದರಿಂದ ತೊಂದರೆಯಾಗುವುದಿಲ್ಲ.
• ಮರಳಿ ಸೇವೆಯನ್ನು ಸಕ್ರಿಯಗೊಳಿಸಲು ಕಠಿಣ ದೃಢೀಕರಣ ವ್ಯವಸ್ಥೆ ಇರುತ್ತದೆ - ‘ಟ್ರಸ್ಟೆಡ್ ಪರ್ಸನ್’ ಅನುಮೋದನೆ ವ್ಯವಸ್ಥೆ
ಗ್ರಾಹಕರು ತಾವು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಮೊತ್ತದ ಎಲೆಕ್ಟ್ರಾನಿಕ್ ಹಣ ವರ್ಗಾವಣೆ ಮಾಡುವಾಗ, ನಾಮನಿರ್ದೇಶಿತ ನಂಬಿಕಸ್ಥ ವ್ಯಕ್ತಿಯ ಅನುಮೋದನೆ ಕಡ್ಡಾಯಗೊಳಿಸುವ ಐಚ್ಛಿಕ ವ್ಯವಸ್ಥೆ ಇದಾಗಿದೆ.
• ಈ ಹಿಂದೆ ಕೇವಲ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ ಚರ್ಚಿಸಲಾಗಿದ್ದ ಈ ಸೌಲಭ್ಯವನ್ನು ಈಗ 18 ವರ್ಷ ಮೇಲ್ಪಟ್ಟ ಎಲ್ಲಾ ಗ್ರಾಹಕರಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.
• ನಿಗದಿತ ಮಿತಿಯನ್ನು ಮೀರಿದ ವರ್ಗಾವಣೆಗೆ ನಂಬಿಕಸ್ಥ ವ್ಯಕ್ತಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಒಂದು ಗಂಟೆಯೊಳಗೆ ಅವರು ಅನುಮೋದಿಸದಿದ್ದರೆ ವಹಿವಾಟು ಸ್ವಯಂಚಾಲಿತವಾಗಿ ರದ್ದಾಗುತ್ತದೆ.
• ನಂಬಿಕಸ್ಥ ವ್ಯಕ್ತಿಗೆ ಯಾವುದೇ ಆರ್ಥಿಕ ಹೊಣೆಗಾರಿಕೆ ಇರುವುದಿಲ್ಲ. ಈ ಸೆಟ್ಟಿಂಗ್ ಬದಲಾಯಿಸಲು 24 ಗಂಟೆಗಳ ಕೂಲಿಂಗ್ ಅವಧಿ ಇರುತ್ತದೆ.
ಯಾವಾಗ ಜಾರಿಯಾಗಬಹುದು?
ಈ ನಿಯಮಗಳು ಕರಡು ರೂಪದಲ್ಲಿದ್ದು, ಬ್ಯಾಂಕುಗಳ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಜನವರಿ 2027ರ ಜನವರಿ 1ರಿಂದ ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ. ಇತರ ಪ್ರಸ್ತಾವನೆಗಳು ಅಂತಿಮಗೊಂಡ ನಂತರ 2027ರ ಜುಲೈ 1ರಿಂದ (ಅಥವಾ ಬ್ಯಾಂಕುಗಳು ಅದಕ್ಕಿಂತ ಮೊದಲೇ ಜಾರಿಗೆ ತಂದರೆ ಆ ದಿನಾಂಕದಿಂದ) ಅನ್ವಯವಾಗಲಿವೆ.


















