ನವದೆಹಲಿ: ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಲಂಡನ್ಗೆ ತೆರಳುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಹ-ಸಂಚಾಲಕ ಸೌರವ್ ದಾಸ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಬ್ರಿಟನ್ನಲ್ಲಿ ‘ಕಾಕ್ರೋಚ್ ಚಳವಳಿ’ಯ ಕುರಿತು ಉಪನ್ಯಾಸ ನೀಡಲು ಆಹ್ವಾನ ಪಡೆದಿದ್ದ ತಮ್ಮನ್ನು ವಲಸೆ (ಇಮಿಗ್ರೇಷನ್) ಕೌಂಟರ್ನಲ್ಲಿ ತಡೆದು ವಿಮಾನ ಹತ್ತದಂತೆ ನಿರ್ಬಂಧಿಸಲಾಗಿದೆ ಎಂದು ದಾಸ್ ಸೋಮವಾರ ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ಬ್ಯಾಂಕ್ ಲೂಟಿ ಮಾಡಿದವರಂತೆ ದೇಶ ಬಿಡಬೇಕಿತ್ತೇ ಎಂದು ವ್ಯಂಗ್ಯ
ತಡರಾತ್ರಿ 1 ಗಂಟೆಗೆ ಲಂಡನ್ ವಿಮಾನ ಏರಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಸೌರವ್ ದಾಸ್ ಅವರಿಗೆ ಇಮಿಗ್ರೇಷನ್ ತಪಾಸಣೆಯ ವೇಳೆ ತಮ್ಮ ಪಾಸ್ಪೋರ್ಟ್ಗೆ ತಡೆ (ಫ್ಲ್ಯಾಗ್) ಹಾಕಿರುವುದು ತಿಳಿದುಬಂದಿದೆ. ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, “ಆಕ್ಸ್ಫರ್ಡ್, ಕೇಂಬ್ರಿಡ್ಜ್, ಎಲ್ಎಸ್ಇ (LSE) ಮತ್ತು ಎಡಿನ್ಬರ್ಗ್ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಲು ನನಗೆ ಆಹ್ವಾನವಿತ್ತು. ಭಾರತೀಯ ವಿದ್ಯಾರ್ಥಿಗಳು ಬಹಳ ಶ್ರಮವಹಿಸಿ ಈ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಆದರೆ ಈ ಹೇಡಿ ಹಾಗೂ ಬುದ್ಧಿಜೀವಿ ವಿರೋಧಿ ಸರ್ಕಾರಕ್ಕೆ ನಾನು ಅಲ್ಲಿಗೆ ಹೋಗುವುದು ಭಯ ತಂದಿದೆ” ಎಂದು ಕಿಡಿಕಾರಿದ್ದಾರೆ.
ವಿದ್ಯಾವಂತ ಯುವಕನೊಬ್ಬ ಬುದ್ಧಿವಂತರ ನಡುವೆ ಕುಳಿತು ಚರ್ಚಿಸುವುದಕ್ಕೆ ಸರ್ಕಾರ ಏಕೆ ಇಷ್ಟೊಂದು ಹೆದರುತ್ತಿದೆ ಎಂದು ಪ್ರಶ್ನಿಸಿರುವ ದಾಸ್, “ನಾನು ನೀರವ್ ಮೋದಿ ಆಗಿರಬೇಕಿತ್ತು, ವಿಜಯ್ ಮಲ್ಯ ಆಗಿರಬೇಕಿತ್ತು. ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ.
ಅಧಿಕಾರದಲ್ಲಿರುವವರಿಗೆ ಹೊಟ್ಟೆಕಿಚ್ಚು: ಅಭಿಜೀತ್ ದೀಪ್ಕೆ ಕಿಡಿ
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಅಧಿಕಾರದಲ್ಲಿರುವ ಕೆಲವರಿಗೆ ಸೌರವ್ ದಾಸ್ ಅವರಿಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿರುವುದನ್ನು ಕಂಡು ಹೊಟ್ಟೆಕಿಚ್ಚು ಉಂಟಾಗಿದೆ ಎಂದು ಆರೋಪಿಸಿದ್ದಾರೆ. “ಸ್ವತಃ ಪ್ರಪಂಚ ಪರ್ಯಟನೆ ಮಾಡಲು ಇಷ್ಟಪಡುವ ಅಧಿಕಾರದಲ್ಲಿರುವ ಕೆಲವು ಅನಕ್ಷರಸ್ಥರಿಗೆ ಸೌರವ್ಗೆ ಆಕ್ಸ್ಫರ್ಡ್ನಿಂದ ಕರೆ ಬಂದಿರುವುದನ್ನು ಸಹಿಸಲು ಆಗುತ್ತಿಲ್ಲ” ಎಂದು ದೀಪ್ಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿದ್ಯಾವಂತರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿಜೆಪಿ ದೂರಿದೆ. ಈ ಘಟನೆಯಿಂದ ತಾವು ಎದೆಗುಂದುವುದಿಲ್ಲ ಮತ್ತು ಭವಿಷ್ಯದಲ್ಲಿ ಖಂಡಿತವಾಗಿಯೂ ಲಂಡನ್, ಪ್ಯಾರಿಸ್ ಸೇರಿದಂತೆ ಹಲವೆಡೆ ಪ್ರಯಾಣಿಸಿ ತಮ್ಮ ಕೆಲಸ ಮುಂದುವರಿಸುವುದಾಗಿ ಸೌರವ್ ದಾಸ್ ಸ್ಪಷ್ಟಪಡಿಸಿದ್ದಾರೆ.



















