ಬೆಂಗಳೂರು: ಬೈಕ್ ಟ್ಯಾಕ್ಸಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಬೈಕ್ ಟ್ಯಾಕ್ಸಿಗಳಿಗೆ ಯೆಲ್ಲೋ ಬೋರ್ಡ್ ಕಡ್ಡಾಯಗೊಳಿಸಿ ವಾಹನ ತೆರಿಗೆ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೆ ಕರ್ನಾಟಕದ ನಿವಾಸಿಗಳಿಗೆ ಮಾತ್ರ ಬೈಕ್ ಟ್ಯಾಕ್ಸಿ ಓಡಿಸಲು ಅನುಮತಿ ನೀಡಲಾಗುತ್ತಿದೆ.
ವೈಟ್ ಬೋರ್ಡ್ ವಾಹನಗಳನ್ನು ಬಳಸುವುದಕ್ಕೆ ಆಟೋ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ವಿರೋಧದ ಹಿನ್ನೆಲೆಯಲ್ಲಿ ಯೆಲ್ಲೋ ಬೋರ್ಡ್ ಇದ್ದವರಿಗೆ ಮಾತ್ರ ಲೈಸೆನ್ಸ್ ಮತ್ತು ಅನುಮತಿ ನೀಡಲು ಸರ್ಕಾರ ಮುಂದಾಗಿದೆ.ಸದ್ಯ ಮೂರು ಚಕ್ರದ ವಾಹನಗಳಿಗೆ ಮಾತ್ರ ಯೆಲ್ಲೋ ಬೋರ್ಡ್‌ಗೆ ಅನುಮತಿ ಇದ್ದು, ದ್ವಿಚಕ್ರ ವಾಹನಗಳಿಗೆ ಯೆಲ್ಲೋ ಬೋರ್ಡ್ ನೀಡಲಾಗುತ್ತಿಲ್ಲ. ಇದರ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ಹೊಸ ನಿಯಮಗಳನ್ನು ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.

















