ಬಳ್ಳಾರಿ : ಪ್ರೀತಿಸಿ ಮದುವೆಯಾಗಿದ್ದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಟ್ಟಿ ಏರಿಯಾದಲ್ಲಿ ನಡೆದಿದ್ದು, ನಬಿ ರಸೂಲ್ ಹತ್ಯೆಯಾದ ಯುವಕ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ನಬಿ ರಸೂಲ್ ಪ್ರೀತಿಸಿ ಮದುವೆಯಾಗಿದ್ದ. ನಿನ್ನೆ ಆತನ ಮನೆಯಲ್ಲಿ ರಿಸೆಪ್ಷನ್ ಕಾರ್ಯಕ್ರಮ ನಡೆದಿತ್ತು. ರಾತ್ರಿ ಸುಮಾರು 11 ಗಂಟೆ ವೇಳೆಗೆ ಮನೆಯಿಂದ ಹೊರಗೆ ಹೋಗಿದ್ದ ರಸೂಲ್ ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ.
ಆ ಬಳಿಕ ಬಳಿಕ ನಬಿ ರಸೂಲ್ನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಕಾರಣ ಯುವತಿಯ ಪೋಷಕರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಹತ್ಯೆ ಮರ್ಯಾದಾ ಹತ್ಯೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಘಟನಾ ಸಂಬಂಧ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ಹೋಗ್ತಿದ್ದ ವೇಳೆ ವೃದ್ಧನ ಮೇಲೆ ಹರಿದ ಟ್ಯಾಂಕರ್!



















