ಬೆಂಗಳೂರು : ಕರ್ನಾಟಕದಲ್ಲಿ ಮತದಾರರ ವಿಶೇಷ ಪರಿಷ್ಕರಣೆ (Special Intensive Revision) ಕಾರ್ಯ ಭರದಿಂದ ಸಾಗುತ್ತಿದೆ. ರಾಜ್ಯದ ಒಟ್ಟು 5,54,32,314 ಮತದಾರರಿಗೆ ಮನೆ ಮನೆಗೆ ತೆರಳಿ ಎನ್ಯೂಮರೇಷನ್ ಫಾರಂ ವಿತರಿಸುವ ಕಾರ್ಯ ನಡೆಯುತ್ತಿದ್ದು, ಇದುವರೆಗೆ 5,34,27,320 ಫಾರಂಗಳು ವಿತರಿಸಲಾಗಿದೆ. ಅಂದರೆ, ಶೇ.96.38ರಷ್ಟು ವಿತರಣೆ ಪೂರ್ಣಗೊಂಡಿದೆ.
ಜುಲೈ 16ರವರೆಗೆ 2,58,61,663 ಎನ್ಯೂಮರೇಷನ್ ಫಾರಂಗಳನ್ನು ಡಿಜಿಟೈಸೇಶನ್ ಮಾಡಲಾಗಿದೆ. ಇದು ಒಟ್ಟು ಫಾರಂಗಳ ಶೇ.46.65ರಷ್ಟು ಆಗಿದೆ. ರಾಜ್ಯದ 47,071 ಮತಗಟ್ಟೆಗಳಲ್ಲಿ ಶೇ.100ರಷ್ಟು ಫಾರಂ ವಿತರಣೆ ಪೂರ್ಣಗೊಂಡಿದ್ದು, 5,462 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ವಿತರಣೆ ನಡೆದಿದೆ. ಅಲ್ಲದೆ, 20 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟೈಸೇಶನ್ ಪೂರ್ಣಗೊಂಡಿದ್ದು, 3,127 ಮತಗಟ್ಟೆಗಳಲ್ಲಿ ಶೇ.90ಕ್ಕೂ ಅಧಿಕ ಡಿಜಿಟೈಸೇಶನ್ ನಡೆದಿದೆ. ಇದೇ ವೇಳೆ 1,85,549 ಮತದಾರರು ಆನ್‌ಲೈನ್ ಮೂಲಕ ಫಾರಂ ಸಲ್ಲಿಸಿದ್ದಾರೆ.
ಪರಿಶೀಲನೆ ವೇಳೆ 18.78 ಲಕ್ಷ ‘Unverified Electors’ (UEF) ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 10.87 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 4.76 ಲಕ್ಷ ಮಂದಿ ಮೃತಪಟ್ಟಿರುವುದು, 2.13 ಲಕ್ಷ ಮತದಾರರು ಪತ್ತೆಯಾಗದಿರುವುದು ದಾಖಲಾಗಿದೆ. ಜೊತೆಗೆ 95,447 ಮಂದಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಇರುವುದೂ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಜೂನ್ 30ರಿಂದ ಆರಂಭವಾದ ಮನೆ ಮನೆ ಸಮೀಕ್ಷೆ ಆಗಸ್ಟ್ 8ರವರೆಗೆ ಮುಂದುವರಿಯಲಿದ್ದು, ಇದೇ ಅವಧಿಯಲ್ಲಿ ಡಿಜಿಟೈಸೇಶನ್ ಕಾರ್ಯವೂ ನಡೆಯಲಿದೆ. ಬೂತ್ ಮಟ್ಟದ ಅಧಿಕಾರಿಗಳಾದ (BLO) ಮೂಲಕ ಮತದಾರರ ಪರಿಶೀಲನೆ ತೀವ್ರಗತಿಯಲ್ಲಿ ಸಾಗುತ್ತಿದೆ.
ಇನ್ನೊಂದೆಡೆ, ಬೆಂಗಳೂರು ನಗರದಲ್ಲಿ ಒಟ್ಟು 40.21 ಲಕ್ಷ ಮತದಾರರಿದ್ದು, ಇದುವರೆಗೆ 31.79 ಲಕ್ಷ ಎನ್ಯೂಮರೇಷನ್ ಫಾರಂಗಳು ವಿತರಣೆಗೊಂಡಿವೆ. 5.51 ಲಕ್ಷ ಫಾರಂಗಳು ಡಿಜಿಟೈಸೇಶನ್ ಆಗಿದ್ದು, ಬಿಬಿಎಂಪಿ ದಕ್ಷಿಣ ವಲಯದಲ್ಲೇ 3.58 ಲಕ್ಷ UEF ಪ್ರಕರಣಗಳು ದಾಖಲಾಗಿವೆ. ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರಗೊಳಿಸುವ ಉದ್ದೇಶದಿಂದ ಪರಿಶೀಲನೆ ಕಾರ್ಯವನ್ನು ಚುನಾವಣಾ ಆಯೋಗ ಮುಂದುವರಿಸಿದೆ.
ಇದನ್ನೂ ಓದಿ : ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ಹೋಗ್ತಿದ್ದ ವೇಳೆ ವೃದ್ಧನ ಮೇಲೆ ಹರಿದ ಟ್ಯಾಂಕರ್!


















