ಬೆಂಗಳೂರು, ಜು.16 : ಮಳೆಗಾಲದಲ್ಲೇ ಬೆಂಗಳೂರು ನಗರದಲ್ಲಿ ಅಸಹಜ ಬಿಸಿಲು ಮುಂದುವರಿದಿದ್ದು, ಕಳೆದ 100 ವರ್ಷಗಳಲ್ಲೇ ಗರಿಷ್ಠ ಮಟ್ಟದ ತಾಪಮಾನ ದಾಖಲಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಸಾಮಾನ್ಯಕ್ಕಿಂತ ಸರಾಸರಿ 4 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಉಷ್ಣಾಂಶ ಹೆಚ್ಚಳವಾಗಿದ್ದು, ಬುಧವಾರ ಸುಮಾರು 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹೆಚ್‌ಎಎಲ್ ವಿಮಾನ ನಿಲ್ದಾಣ ಕೇಂದ್ರದಲ್ಲಿ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಗಮನಾರ್ಹ. ಹವಾಮಾನ ದಾಖಲೆಗಳ ಪ್ರಕಾರ, 1914ರಲ್ಲಿ ಮಳೆಗಾಲದಲ್ಲಿ 33.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ಈವರೆಗಿನ ಅತಿ ಹೆಚ್ಚು ದಾಖಲೆ. ಈ ವರ್ಷವೂ ಆ ಮಟ್ಟದ ಸಮೀಪಕ್ಕೆ ತಾಪಮಾನ ಏರಿಕೆಯಾಗಿದೆ.
ವರ್ಷವಾರು ಮಳೆಗಾಲದ ಗರಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್) :
1914 – 33.3
1926 – 33.1
2016 – 30.7
2017 – 31.3
2018 – 30.2
2019 – 31.2
2020 – 31.0
2021 – 32.7
2022 – 30.8
2023 – 30.8
2024 – 31.0
2025 – 30.0
2026 – 32.0 (ಪ್ರಸ್ತುತ)
ನೈರುತ್ಯ ಮಾರುತ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕುಸಿದಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 4 ರಿಂದ 5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ.
ಇದೇ ವೇಳೆ, ಕರಾವಳಿ ಭಾಗದಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ಆರೋಪ – ‘ಅಮುಕು ಡುಮುಕು’ ಮಂಜು ವಿರುದ್ಧ FIR!


















