ನವದೆಹಲಿ/ಢಾಕಾ: ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್ ಕಚೇರಿ ಎದುರು ನಡೆದ ಪ್ರತಿಭಟನೆಯ ವಿಚಾರವಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಾಜತಾಂತ್ರಿಕ ವಾಕ್ಸಮರ ತೀವ್ರಗೊಂಡಿದೆ. ಭದ್ರತಾ ಲೋಪದ ಆರೋಪವನ್ನು ಭಾರತ ತಳ್ಳಿಹಾಕಿದ ಬೆನ್ನಲ್ಲೇ, ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಹಂಗಾಮಿ ಸರ್ಕಾರ, ಪರಿಸ್ಥಿತಿ ಹದಗೆಟ್ಟರೆ ಭಾರತದಲ್ಲಿನ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಭಾರತದ ಸ್ಪಷ್ಟನೆ ಏನು?
ಬಾಂಗ್ಲಾದೇಶದ ಕೆಲವು ಮಾಧ್ಯಮಗಳಲ್ಲಿ ದೆಹಲಿಯ ಬಾಂಗ್ಲಾ ಹೈಕಮಿಷನ್ ಭದ್ರತೆಯ ಬಗ್ಗೆ ಪ್ರಸಾರವಾಗುತ್ತಿರುವ ವರದಿಗಳನ್ನು ಭಾರತದ ವಿದೇಶಾಂಗ ಸಚಿವಾಲಯವು “ದಾರಿ ತಪ್ಪಿಸುವ ಪ್ರಚಾರ” ಎಂದು ಕರೆದಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಡಿಸೆಂಬರ್ 20ರಂದು ಬಾಂಗ್ಲಾದೇಶದ ಮೈಮನಸಿಂಗ್‌ನಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಹತ್ಯೆಯನ್ನು ಖಂಡಿಸಿ ಸುಮಾರು 20-25 ಯುವಕರು ಹೈಕಮಿಷನ್ ಎದುರು ಜಮಾಯಿಸಿ ಘೋಷಣೆ ಕೂಗಿದ್ದರು. ಅಲ್ಪಸಂಖ್ಯಾತರ ರಕ್ಷಣೆಗೆ ಅವರು ಒತ್ತಾಯಿಸಿದ್ದರು. ಕಚೇರಿಯ ಆವರಣಕ್ಕೆ ನುಗ್ಗಲು ಅಥವಾ ಬೇಲಿಯನ್ನು ಹಾನಿಗೊಳಿಸಲು ಯಾವುದೇ ಪ್ರಯತ್ನ ನಡೆದಿಲ್ಲ. ಸ್ಥಳದಲ್ಲಿದ್ದ ಪೊಲೀಸರು ಕೆಲವೇ ನಿಮಿಷಗಳಲ್ಲಿ ಗುಂಪನ್ನು ಚದುರಿಸಿದ್ದಾರೆ,” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ವಿಯೆನ್ನಾ ಒಪ್ಪಂದದ ಪ್ರಕಾರ ವಿದೇಶಿ ರಾಜತಾಂತ್ರಿಕ ಕಚೇರಿಗಳಿಗೆ ರಕ್ಷಣೆ ಒದಗಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ಆಕ್ಷೇಪ ಮತ್ತು ಎಚ್ಚರಿಕೆ
ಭಾರತದ ಈ ಹೇಳಿಕೆಯನ್ನು ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ವಿದೇಶಾಂಗ ಸಲಹೆಗಾರ ಎಂ. ತೌಹಿದ್ ಹೊಸೈನ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಢಾಕಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅತ್ಯಂತ ಸುರಕ್ಷಿತ ರಾಜತಾಂತ್ರಿಕ ವಲಯದಲ್ಲಿರುವ ಹೈಕಮಿಷನ್ ಕಚೇರಿಯ ಹತ್ತಿರ ಪ್ರತಿಭಟನಾಕಾರರು ಬರಲು ಹೇಗೆ ಸಾಧ್ಯವಾಯಿತು?” ಎಂದು ಪ್ರಶ್ನಿಸಿದ್ದಾರೆ.
“ಇದು ಕೇವಲ 20-25 ಜನರ ವಿಷಯವಲ್ಲ. ಅನುಮತಿ ಇಲ್ಲದೆ ಅಷ್ಟು ಸೂಕ್ಷ್ಮ ವಲಯಕ್ಕೆ ಅವರು ತಲುಪಲು ಸಾಧ್ಯವಿಲ್ಲ. ಭಾರತದ ಹೇಳಿಕೆ ವಿಷಯವನ್ನು ಸರಳೀಕರಿಸುವಂತಿದೆ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬಾಂಗ್ಲಾದೇಶದ ರಾಯಭಾರಿಗೆ ಜೀವ ಬೆದರಿಕೆ ಇದೆ ಎಂಬ ವದಂತಿಗಳಿಗೆ ಯಾವುದೇ ಖಚಿತ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ ಅವರು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜತಾಂತ್ರಿಕ ಸಂಬಂಧಗಳನ್ನು ಮೊಟಕುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ಹಿಂದೂ ಸಮುದಾಯದ ದೀಪು ಚಂದ್ರ ದಾಸ್ ಎಂಬುವವರನ್ನು ಹತ್ಯೆ ಮಾಡಿ, ಶವವನ್ನು ಸುಟ್ಟು ಹಾಕಲಾಗಿತ್ತು. ಈ ಘಟನೆಯನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆದಿತ್ತು. ದೀಪು ಚಂದ್ರ ದಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಿಜೆಪಿ ಖಜಾನೆಗೆ ಹರಿದುಬಂತು 6,654 ಕೋಟಿ ರೂ. : ಕಾಂಗ್ರೆಸ್ ದೇಣಿಗೆ ಸಂಗ್ರಹದಲ್ಲಿ ಭಾರೀ ಕುಸಿತ



















