ಚಟ್ಟೋಗ್ರಾಮ್ : ಬಾಂಗ್ಲಾದೇಶದ ಚಟ್ಟೋಗ್ರಾಮ್‌ನಲ್ಲಿ ಸೇನಾ ತರಬೇತಿ ವೇಳೆ ಭೀಕರ ಅವಘಡ ಸಂಭವಿಸಿದ್ದು, ಟ್ಯಾಂಕ್‌ನಿಂದ ಗುಂಡು ಹಾರಿಸುವ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸೇನಾ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಟ್ಟೋಗ್ರಾಮ್‌ನ ಹಠಹಜಾರಿ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಬಾಂಗ್ಲಾದೇಶದ ಅಂತರ್-ಸೇನಾ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (ISPR) ತಿಳಿಸಿದೆ.
ಗುಂಡು ಹಾರಿಸುವಾಗಲೇ ಟ್ಯಾಂಕ್‌ನಲ್ಲಿ ಸ್ಫೋಟ
ವರದಿಗಳ ಪ್ರಕಾರ, ಫೀಲ್ಡ್ ಫೈರಿಂಗ್ ಅಭ್ಯಾಸದ ಭಾಗವಾಗಿ ಸೈನಿಕರು ಟ್ಯಾಂಕ್‌ನಿಂದ ಗುಂಡು ಹಾರಿಸುತ್ತಿದ್ದರು. ಈ ವೇಳೆ ಟ್ಯಾಂಕ್‌ನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿದೆ. ಟ್ಯಾಂಕ್‌ನೊಳಗಿದ್ದ ಇಬ್ಬರು ಸೈನಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಅಬು ಬಕರ್ ಸಿದ್ದಿಕ್ ಹಾಗೂ ತಸ್ನಿಮ್ ರಿಫಾತ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೇನಾ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗೆ ಹೆಲಿಕಾಪ್ಟರ್ ಮೂಲಕ ಢಾಕಾದ ಕಂಬೈನ್ಡ್ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಮೂಲದ ಟೈಪ್–59 ಟ್ಯಾಂಕ್
ಅವಘಡಕ್ಕೆ ಒಳಗಾದ ಟ್ಯಾಂಕ್ ಚೀನಾ ಮೂಲದ ಟೈಪ್–59 ಮಾದರಿಯದ್ದಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶ ಸೇನೆಯಲ್ಲಿ ಈ ಟ್ಯಾಂಕ್ ಬಳಕೆಯಲ್ಲಿದೆ. ಆದರೆ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ತಾಂತ್ರಿಕ ದೋಷ, ಗುಂಡು-ಮದ್ದುಗುಂಡು ಸಂಬಂಧಿತ ಸಮಸ್ಯೆ ಅಥವಾ ಮತ್ತಾವುದೇ ಕಾರಣದಿಂದ ಘಟನೆ ಸಂಭವಿಸಿತೇ ಎಂಬುದು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಕಾರಣ ಪತ್ತೆಗೆ ತನಿಖೆ ಆರಂಭ
ಘಟನೆಯ ಬಗ್ಗೆ ಬಾಂಗ್ಲಾದೇಶ ಸೇನೆ ತನಿಖೆ ಆರಂಭಿಸಿದೆ. ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಸದ್ಯಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನು ಸೇನೆ ಅಧಿಕೃತವಾಗಿ ಪ್ರಕಟಿಸಿಲ್ಲ.
ಇದನ್ನೂ ಓದಿ : ಕೇಂದ್ರ ಸರ್ಕಾರದ HLL Lifecare ಸಂಸ್ಥೆಯಲ್ಲಿ ನೇಮಕಾತಿ : ಬೆಂಗಳೂರಿನಲ್ಲೇ ಕೆಲಸ


















