ಬೆಂಗಳೂರು : ಅಧಿಕಾರಿಗಳ ಕಿರುಕುಳ, ಹಫ್ತಾ ವಸೂಲಿ ಹಾಗೂ ಪುಡಿ ರೌಡಿಗಳ ದಬ್ಬಾಳಿಕೆ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಇದೇ ಗುರುವಾರ (ಜೂನ್ 18) ಬೆಳಿಗ್ಗೆ 5 ಗಂಟೆಯಿಂದ ಬೃಹತ್ ಮಟ್ಟದ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣವಾಗಿ ಬಂದ್ ಆಗುವ ನಿರೀಕ್ಷೆ ಇದೆ.
ನಗರದಲ್ಲಿನ ಬೇಕರಿ, ಕಾಂಡಿಮೆಂಟ್‌ಗಳು, ಟೀ ಸ್ಟಾಲ್‌ಗಳು ಹಾಗೂ ರಸ್ತೆ ಬದಿಯ ಸಣ್ಣ ಉಪಾಹಾರ ಕೇಂದ್ರಗಳ ಮಾಲೀಕರು ನಾಳೆಯಿಂದ ಅಂಗಡಿಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಿದ್ದಾರೆ. ನಗರದ ವಿವಿಧ ಭಾಗಗಳ ಸಾವಿರಾರು ಬೇಕರಿ, ಕಾಂಡಿಮೆಂಟ್‌ಗಳು ಮತ್ತು ಸಣ್ಣ ಆಹಾರ ಮಳಿಗೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಬೆಳಗಿನ ಉಪಾಹಾರ, ಚಹಾ-ಕಾಫಿ ಹಾಗೂ ತಿಂಡಿ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರಂತರ ತಪಾಸಣೆ ನಡೆಸುವ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡುವ ಕ್ರಮಗಳಿಂದ ವ್ಯಾಪಾರ ನಡೆಸುವುದು ಕಷ್ಟಕರವಾಗುತ್ತಿದೆ. ಕಾನೂನುಬದ್ಧವಾಗಿ ಮಾರಾಟಕ್ಕೆ ಅವಕಾಶ ಇರುವ ತಂಬಾಕು ಉತ್ಪನ್ನಗಳನ್ನು ಅಧಿಕಾರಿಗಳು ಸೀಜ್ ಮಾಡುತ್ತಿರುವುದರಿಂದ ಗೊಂದಲ ಉಂಟಾಗಿದೆ ಎಂದು ವ್ಯಾಪಾರಿಗಳು ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಆರ್ಥಿಕ ನಷ್ಟ ಎದುರಿಸುತ್ತಿರುವುದಾಗಿ ಹೇಳಿದ್ದಾರೆ.
ಸುಮಾರು 58 ಸಾವಿರ ಸಣ್ಣ ಉದ್ದಿಮೆದಾರರು ನಾಳೆ ನಡೆಯುವ ಮುಷ್ಕರದಲ್ಲಿ ಭಾಗವಹಿಸಲಿದ್ದು, ಬೇಡಿಕೆಗಳು ಈಡೇರುವವರೆಗೂ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
ವ್ಯಾಪಾರಿಗಳ ಪ್ರಮುಖ ಬೇಡಿಕೆಗಳಲ್ಲಿ ದಬ್ಬಾಳಿಕೆ ಮತ್ತು ಕಿರುಕುಳಕ್ಕೆ ಅಂತ್ಯ, ಸಣ್ಣ ವ್ಯಾಪಾರಿಗಳಿಗೆ ಭದ್ರತೆ ಒದಗಿಸುವುದು, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸ್ಪಷ್ಟ ನೀತಿ ರೂಪಿಸುವುದು, ತಂಬಾಕು ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ನೀಡಬೇಕು, ಇಲ್ಲವಾದರೆ ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಪ್ರತಿಕ್ರಿಯಿಸಿ, ಸಣ್ಣ ಬಂಡವಾಳ ಹೂಡಿ ಕುಟುಂಬ ನಿರ್ವಹಿಸುತ್ತಿರುವ ವ್ಯಾಪಾರಿಗಳಿಗೆ ರಕ್ಷಣೆ ಮತ್ತು ನ್ಯಾಯ ಸಿಗಬೇಕು. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ವಾಯುಪಡೆ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರ ಆರೋಪ : ಇಬ್ಬರ ಬಂಧನ



















